Home Blog Page 13

ವಿಜಯ್–ಸಂಗೀತಾ ವಿಚ್ಛೇದನ ಪ್ರಕರಣಕ್ಕೆ ಟ್ವಿಸ್ಟ್: ಚೆಂಗಲ್ಪಟ್ಟು ಕೋರ್ಟ್‌ನಲ್ಲಿ ಇಂದು ಹೈ-ಪ್ರೊಫೈಲ್ ವಿಚಾರಣೆ

ಚೆನ್ನೈ: ತಮಿಳುನಾಡು ಸಿಎಂ ವಿಜಯ್ ಮತ್ತು ಅವರ ಪತ್ನಿ ಸಂಗೀತಾ ನಡುವಿನ ವಿಚ್ಛೇದನ ಪ್ರಕರಣ ಇಂದು (ಜೂನ್ 15) ಚೆಂಗಲ್ಪಟ್ಟು ಕೌಟುಂಬಿಕ ನ್ಯಾಯಾಲಯದಲ್ಲಿ ವಿಚಾರಣೆಗೆ ಬರುತ್ತಿದೆ. ಈ ಪ್ರಕರಣ ಈಗ ರಾಜ್ಯಾದ್ಯಂತ ಗಮನ ಸೆಳೆದಿದೆ.

ಸಂಗೀತಾ ಫೆಬ್ರವರಿ 24ರಂದು ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿದ್ದರು. ನಂತರ ಏಪ್ರಿಲ್ 20ರಂದು ವಿಚಾರಣೆ ನಿಗದಿಯಾಗಿದ್ದರೂ ಇಬ್ಬರೂ ನ್ಯಾಯಾಲಯಕ್ಕೆ ಹಾಜರಾಗಿರಲಿಲ್ಲ. ಆ ಸಂದರ್ಭದಲ್ಲಿ ವಕೀಲರು ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆ ನಡೆಸಲು ಮನವಿ ಮಾಡಿದ್ದರು. ನ್ಯಾಯಾಲಯ ಅದನ್ನು ಅಂಗೀಕರಿಸಿ ಇಂದು ಹೊಸ ದಿನಾಂಕ ನೀಡಿತ್ತು.

ಇಂದು ವಿಚಾರಣೆಯಲ್ಲಿ ದಂಪತಿ ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರಾಗುವ ಸಾಧ್ಯತೆ ಇದೆ. ಆದರೆ ನೇರವಾಗಿ ಕೋರ್ಟ್‌ಗೆ ಹಾಜರಾಗುತ್ತಾರೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.

ಇದೇ ನಡುವೆ, ಇಬ್ಬರ ನಡುವೆ ರಾಜಿ ಸಾಧ್ಯತೆಗಳ ಕುರಿತು ಊಹಾಪೋಹಗಳು ಹೆಚ್ಚುತ್ತಿವೆ. ವಿಜಯ್ ಅವರ ತಾಯಿ ಶೋಭಾ ಚಂದ್ರಶೇಖರ್ ಮಧ್ಯಸ್ಥಿಕೆ ನಡೆಸುತ್ತಿರುವ ಬಗ್ಗೆ ಚರ್ಚೆ ನಡೆಯುತ್ತಿದ್ದು, ಪ್ರಕರಣದಲ್ಲಿ ಹೊಸ ತಿರುವು ಬರಬಹುದೇ ಎಂಬ ನಿರೀಕ್ಷೆ ಇದೆ. ನ್ಯಾಯಾಲಯದ ಇಂದು ನಡೆಯುವ ವಿಚಾರಣೆ ಪ್ರಕರಣದ ಮುಂದಿನ ಹಾದಿಗೆ ನಿರ್ಣಾಯಕವಾಗಲಿದೆ.

ಮತ್ತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟಿ ಊರ್ಮಿಳಾ ಮಾತೋಂಡ್ಕರ್ ಮಾಜಿ ಪತಿ

ಮುಂಬೈ: ಬಾಲಿವುಡ್ ನಟಿ ಊರ್ಮಿಳಾ ಮಾತೋಂಡ್ಕರ್ ಅವರ ಮಾಜಿ ಪತಿ ಮೊಹ್ಸಿನ್ ಅಖ್ತರ್ ಎರಡನೇ ಮದುವೆಯಾಗಿದ್ದಾರೆ.

ಊರ್ಮಿಳಾ ಜೊತೆ ವಿಚ್ಛೇದನ ಪಡೆದು ಎರಡು ವರ್ಷಗಳ ಬಳಿಕ ಮೊಹ್ಸಿನ್ ಇದೀಗ ನಿಧಾ ಭಟ್ ಅವರೊಂದಿಗೆ ವೈವಾಹಿಕ ಜೀವನ ಆರಂಭಿಸಿದ್ದಾರೆ. ತಮ್ಮ ವಿವಾಹದ ಫೋಟೋಗಳನ್ನು ಅವರು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಹಂಚಿಕೊಂಡಿದ್ದು, ಭಾವನಾತ್ಮಕ ಸಂದೇಶವನ್ನೂ ಪ್ರಕಟಿಸಿದ್ದಾರೆ.

ಪೋಸ್ಟ್‌ನಲ್ಲಿ ಮೊಹ್ಸಿನ್ ಅವರು ಪ್ರೀತಿ, ತಾಳ್ಮೆ, ಕೃತಜ್ಞತೆ ಮತ್ತು ಧಾರ್ಮಿಕ ನಂಬಿಕೆಯ ಕುರಿತು ಮಾತನಾಡಿದ್ದು, ನಿಧಾ ಭಟ್ ತಮ್ಮ ಜೀವನದಲ್ಲಿ ಹೊಸ ಬೆಳಕು ತಂದಿದ್ದಾರೆ ಎಂದು ತಿಳಿಸಿದ್ದಾರೆ. ಜೊತೆಗೆ ತಮ್ಮ ತಾಯಿಗೆ ಧನ್ಯವಾದ ತಿಳಿಸಿ ಕುಟುಂಬದ ಬೆಂಬಲವನ್ನು ಸ್ಮರಿಸಿದ್ದಾರೆ.

ಮೊಹ್ಸಿನ್ ಅಖ್ತರ್ ಮತ್ತು ಊರ್ಮಿಳಾ ಮಾತೋಂಡ್ಕರ್ 2016ರಲ್ಲಿ ವಿವಾಹವಾಗಿದ್ದರು. ವಯಸ್ಸಿನ ಅಂತರ ಮತ್ತು ವಿಭಿನ್ನ ಧರ್ಮ ಹಿನ್ನೆಲೆಯಿಂದಾಗಿ ಇವರ ಮದುವೆ ಆಗಲೇ ಚರ್ಚೆಗೆ ಗ್ರಾಸವಾಗಿತ್ತು. 2024ರಲ್ಲಿ ಇವರ ದಾಂಪತ್ಯದಲ್ಲಿ ಬಿರುಕು ಮೂಡಿ, ನಂತರ ಅಧಿಕೃತವಾಗಿ ವಿಚ್ಛೇದನ ಪ್ರಕ್ರಿಯೆ ಆರಂಭವಾಗಿತ್ತು.

ಇದೀಗ ಮೊಹ್ಸಿನ್ ಅಖ್ತರ್ ಅವರ ಎರಡನೇ ಮದುವೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಕಾರಣವಾಗಿದೆ.

ಕೇರಳದಲ್ಲಿ ಮಹಿಳೆಯರು–ತೃತೀಯಲಿಂಗಿಗಳಿಗೆ ಉಚಿತ ಬಸ್ ಪ್ರಯಾಣ: ‘ಪ್ರಿಯದರ್ಶಿನಿ’ ಯೋಜನೆಗೆ ಸರ್ಕಾರದಿಂದ ಅಧಿಕೃತ ಚಾಲನೆ

0

ತಿರುವನಂತಪುರಂ: ಕೇರಳ ಸರ್ಕಾರ ಮಹಿಳೆಯರು ಮತ್ತು ತೃತೀಯಲಿಂಗಿಗಳಿಗೆ ಉಚಿತ ಬಸ್ ಪ್ರಯಾಣ ಸೌಲಭ್ಯ ಒದಗಿಸುವ ಮಹತ್ವಾಕಾಂಕ್ಷಿ ‘ಪ್ರಿಯದರ್ಶಿನಿ’ ಯೋಜನೆಯನ್ನು ಇಂದು ಅಧಿಕೃತವಾಗಿ ಆರಂಭಿಸಿದೆ.

ತಿರುವನಂತಪುರಂನ ತಂಪನೂರು ಕೇಂದ್ರ ಬಸ್ ನಿಲ್ದಾಣದಲ್ಲಿ ಮುಖ್ಯಮಂತ್ರಿ ವಿ.ಡಿ. ಸತೀಶನ್ ಅವರು ಯೋಜನೆಗೆ ಚಾಲನೆ ನೀಡಿದರು. ಉದ್ಘಾಟನಾ ಪ್ರಯಾಣದಲ್ಲಿ ಮುಖ್ಯಮಂತ್ರಿ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದರು. ವಿಶೇಷವಾಗಿ ಈ ಪ್ರಯಾಣವನ್ನು ಸಂಪೂರ್ಣವಾಗಿ ಮಹಿಳಾ ಸಿಬ್ಬಂದಿಯೇ ನಿರ್ವಹಿಸಿದರು.

ಈ ಯೋಜನೆಯಡಿ ಮಹಿಳೆಯರು ಮತ್ತು ತೃತೀಯಲಿಂಗಿಗಳು ಕೇರಳ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC) ನಡೆಸುವ ಸಾಮಾನ್ಯ ಬಸ್‌ಗಳಲ್ಲಿ ಉಚಿತವಾಗಿ ಪ್ರಯಾಣಿಸಬಹುದು. ರಾಜ್ಯಾದ್ಯಂತ ಸುಮಾರು 3,125 ಸಾಮಾನ್ಯ ಬಸ್‌ಗಳು ಈ ಯೋಜನೆಯ ವ್ಯಾಪ್ತಿಗೆ ಒಳಪಡಲಿವೆ.

ಸಾಮಾನ್ಯ, ಸಿಟಿ ಆರ್ಡಿನರಿ, ಲಿಮಿಟೆಡ್ ಸ್ಟಾಪ್, ಟೌನ್ ಟು ಟೌನ್, ಪಾಯಿಂಟ್ ಟು ಪಾಯಿಂಟ್ ಹಾಗೂ ಗ್ರಾಮವಂಡಿ ಸೇರಿದಂತೆ ಏಳು ವಿಭಾಗದ ಬಸ್‌ಗಳಲ್ಲಿ ಈ ಸೌಲಭ್ಯ ಲಭ್ಯವಾಗಲಿದೆ. ಅರ್ಹ ಬಸ್‌ಗಳನ್ನು ಗುರುತಿಸಲು ವಿಶೇಷ ಸ್ಟಿಕ್ಕರ್‌ಗಳನ್ನು ಅಳವಡಿಸಲಾಗಿದೆ.

ಮಹಿಳಾ ಸಬಲೀಕರಣದತ್ತ ಇದು ಮಹತ್ವದ ಹೆಜ್ಜೆಯಾಗಿದೆ ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ. ಯೋಜನೆ ವೆಚ್ಚವನ್ನು ರಾಜ್ಯ ಸರ್ಕಾರವೇ ಭರಿಸಲಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಸಾಹಿತಿ ಪಿ. ಲಂಕೇಶ್ ಅವರ ಜೀವನ ಸಂಗಾತಿ ಇಂದಿರಾ ಲಂಕೇಶ್ ಇನ್ನಿಲ್ಲ!

ಬೆಂಗಳೂರು:  ಕನ್ನಡದ ಪ್ರಸಿದ್ಧ ಸಾಹಿತಿ ಹಾಗೂ ಪತ್ರಕರ್ತ ಪಿ. ಲಂಕೇಶ್ ಅವರ ಧರ್ಮಪತ್ನಿ ಇಂದಿರಾ ಲಂಕೇಶ್ ಅವರು ಇಂದು ನಿಧನರಾಗಿದ್ದಾರೆ.

ಅವರ ನಿಧನದಿಂದ ಸಾಹಿತ್ಯ ಮತ್ತು ಸಾಂಸ್ಕೃತಿಕ ವಲಯದಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದೆ.

ಇಂದಿರಾ ಲಂಕೇಶ್ ಅವರು ಸ್ವತಃ ಲೇಖಕಿ ಹಾಗೂ ಉದ್ಯಮಿಯಾಗಿ ಗುರುತಿಸಿಕೊಂಡಿದ್ದರು. ಪತಿ ಪಿ. ಲಂಕೇಶ್ ಅವರ ಸಾಹಿತ್ಯಕ ಬದುಕಿಗೆ ಸದಾ ಬೆಂಬಲವಾಗಿ ನಿಂತಿದ್ದ ಅವರು, ಆರ್ಥಿಕ ಸಂಕಷ್ಟದ ಸಮಯದಲ್ಲೂ ಕುಟುಂಬವನ್ನು ಮುನ್ನಡೆಸಿದ ದಿಟ್ಟ ಮಹಿಳೆಯಾಗಿದ್ದರು. ಯಾವುದೇ ಅನುಭವವಿಲ್ಲದಿದ್ದರೂ ಸೀರೆ ಅಂಗಡಿ ಆರಂಭಿಸಿ ಕುಟುಂಬದ ಹೊಣೆ ಹೊತ್ತಿದ್ದರು.

ಅವರು ಬರೆದಿರುವ ‘ಹುಳಿಮಾವು ಮತ್ತು ನಾನು’ ಎಂಬ ಆತ್ಮಕಥನಾತ್ಮಕ ಕಾದಂಬರಿಯಲ್ಲಿ ತಮ್ಮ ಜೀವನದ ಅನುಭವಗಳು ಹಾಗೂ ಪಿ. ಲಂಕೇಶ್ ಅವರೊಂದಿಗಿನ ಒಡನಾಟವನ್ನು ಹಂಚಿಕೊಂಡಿದ್ದರು.

ಈ ದಂಪತಿಗೆ ಮೂವರು ಮಕ್ಕಳು ಇದ್ದು, ಹಿರಿಯ ಪತ್ರಕರ್ತೆ ಹಾಗೂ ಸಾಮಾಜಿಕ ಕಾರ್ಯಕರ್ತೆ ಗೌರಿ ಲಂಕೇಶ್, ಚಲನಚಿತ್ರ ನಿರ್ದೇಶಕಿ ಕವಿತಾ ಲಂಕೇಶ್ ಮತ್ತು ನಿರ್ದೇಶಕ ಇಂದ್ರಜಿತ್ ಲಂಕೇಶ್ ಅವರು ತಮ್ಮ ಕ್ಷೇತ್ರಗಳಲ್ಲಿ ಹೆಸರು ಮಾಡಿದ್ದಾರೆ.

ಇಂದಿರಾ ಲಂಕೇಶ್ ಅವರ ನಿಧನಕ್ಕೆ ಸಾಹಿತ್ಯ, ರಾಜಕೀಯ ಹಾಗೂ ಚಲನಚಿತ್ರ ಕ್ಷೇತ್ರದ ಅನೇಕ ಗಣ್ಯರು ಸಂತಾಪ ಸೂಚಿಸಿದ್ದಾರೆ.

ಅಮೆರಿಕದಲ್ಲಿ ವಿಮಾನ ಪತನ: ಪೈಲಟ್ ಸೇರಿ 12 ಮಂದಿ ದುರ್ಮರಣ!

0

ವಾಷಿಂಗ್ಟನ್: ಅಮೆರಿಕದ ಮಿಸೌರಿ ರಾಜ್ಯದಲ್ಲಿ ನಡೆದ ಭೀಕರ ವಿಮಾನ ಅಪಘಾತದಲ್ಲಿ 11 ಸ್ಕೈಡೈವರ್‌ಗಳು ಮತ್ತು 1 ಪೈಲಟ್ ಸೇರಿ ಒಟ್ಟು 12 ಮಂದಿ ಸಾವನ್ನಪ್ಪಿರುವ ದುರ್ಘಟನೆ ನಡೆದಿದೆ.

ಸ್ಕೈಡೈವಿಂಗ್ ಚಟುವಟಿಕೆಗಾಗಿ ಗುತ್ತಿಗೆ ಪಡೆದಿದ್ದ ವಿಮಾನವು ಭಾನುವಾರ ಸ್ಥಳೀಯ ಸಮಯ 11:20ರ ಸುಮಾರಿಗೆ ಟೇಕ್‌ಆಫ್ ಆಗಿತ್ತು.

ಹಾರಾಟ ಆರಂಭವಾದ ಕೆಲವೇ ಕ್ಷಣಗಳಲ್ಲಿ ವಿಮಾನವು ತೀಕ್ಷ್ಣ ಎಡ ತಿರುವು ಪಡೆದು ಬಟ್ಲರ್ ಸ್ಮಾರಕ ವಿಮಾನ ನಿಲ್ದಾಣದಿಂದ ಸುಮಾರು 200 ಗಜ ದೂರದಲ್ಲಿ ಅಪ್ಪಳಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬೇಟ್ಸ್ ಕೌಂಟಿ ತುರ್ತು ನಿರ್ವಹಣಾ ವಕ್ತಾರರ ಪ್ರಕಾರ, ವಿಮಾನದಲ್ಲಿದ್ದ ಎಲ್ಲಾ 12 ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಘಟನೆ ಕುರಿತು ತೀವ್ರ ಪರಿಶೀಲನೆ ನಡೆಯುತ್ತಿದೆ.

ಅಮೆರಿಕದ ಫೆಡರಲ್ ಏವಿಯೇಷನ್ ಆಡಳಿತ (FAA) ಮಾಹಿತಿ ಪ್ರಕಾರ, ಅಪಘಾತಕ್ಕೀಡಾದ ವಿಮಾನವು ಪೆಸಿಫಿಕ್ ಏರೋಸ್ಪೇಸ್ P-750 ಆಗಿದ್ದು, ವಾಣಿಜ್ಯ ಪ್ರಯಾಣಿಕ ವಿಮಾನವಲ್ಲ, ಸ್ಥಳೀಯ ಸ್ಕೈಡೈವಿಂಗ್ ಕಾರ್ಯಾಚರಣೆಗೆ ಬಳಸಲಾಗುತ್ತಿತ್ತು.

ಅಪಘಾತದ ನಿಖರ ಕಾರಣವನ್ನು ಪತ್ತೆಹಚ್ಚಲು ತನಿಖೆ ಮುಂದುವರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ರಸ್ತೆ ಅಪಘಾತದಲ್ಲಿ ಗಾಯಾಗೊಂಡಿದ್ದ ಯುವಕ ಸಾವು

0

ಉಪ್ಪಿನಂಗಡಿ: ಕಾರು ಮತ್ತು ಬೈಕ್ ನಡುವೆ ಸಂಭವಿಸಿದ್ದ ಭೀಕರ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ತಿಂಗಳುಗಳ ಕಾಲ ಕೋಮಾ ಸ್ಥಿತಿಯಲ್ಲಿದ್ದ ಬದ್ರುದ್ದೀನ್ ಮಠ ಅವರು ಚಿಕಿತ್ಸೆ ಫಲಿಸದೆ ಜೂನ್ 14ರಂದು ನಿಧನರಾಗಿದ್ದಾರೆ.

ಮೂಲತಃ ಮಠ ನಿವಾಸಿಯಾಗಿದ್ದ ಬದ್ರುದ್ದೀನ್, ಪ್ರಸ್ತುತ ನೆಕ್ಕಿಲಾಡಿಯ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು. ಕೂಟೇಲ್ ಹೋಟೆಲ್‌ನಲ್ಲಿ ಉದ್ಯೋಗದಲ್ಲಿದ್ದ ಅವರು 2025ರ ಡಿಸೆಂಬರ್ 11ರ ರಾತ್ರಿ ಉಪ್ಪಿನಂಗಡಿಯಿಂದ ನೆಕ್ಕಿಲಾಡಿಗೆ ಬೈಕ್‌ನಲ್ಲಿ ತೆರಳುತ್ತಿದ್ದಾಗ ಎದುರಿನಿಂದ ಬಂದ ಕಾರು ಅವರ ವಾಹನಕ್ಕೆ ಮುಖಾಮುಖಿ ಢಿಕ್ಕಿ ಹೊಡೆದಿತ್ತು.

ಘಟನೆಯ ನಂತರ ಗಂಭೀರವಾಗಿ ಗಾಯಗೊಂಡ ಅವರನ್ನು ಪುತ್ತೂರಿನಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ, ಬಳಿಕ ಮಂಗಳೂರಿಗೆ ಸ್ಥಳಾಂತರಿಸಲಾಗಿತ್ತು. ಆದರೆ ಚಿಕಿತ್ಸೆ ವೇಳೆ ಅವರು ಕೋಮಾ ಸ್ಥಿತಿಗೆ ಜಾರಿದ್ದರು.

ದೀರ್ಘಕಾಲ ಆಸ್ಪತ್ರೆ ಮತ್ತು ನಂತರ ಮನೆಯಲ್ಲಿನ ಆರೈಕೆಯಲ್ಲಿದ್ದ ಅವರು ಅಂತಿಮವಾಗಿ ಜೂನ್ 14ರಂದು ಮಧ್ಯಾಹ್ನ ಕೊನೆಯುಸಿರೆಳೆದಿದ್ದಾರೆ. ನಂತರ ಅವರ ಅಂತ್ಯಸಂಸ್ಕಾರವನ್ನು ಮಠದ ಬದ್ರಿಯ ಜುಮಾ ಮಸೀದಿಯಲ್ಲಿ ನಡೆಸಲಾಗಿದೆ.

ತಾಯಿಯಿಂದ ಬೇರ್ಪಟ್ಟ ಮರಿಯಾನೆ ಗ್ರಾಮಕ್ಕೆ ಎಂಟ್ರಿ: ಜನರಲ್ಲಿ ಆತಂಕ!

ಆನೇಕಲ್: ತಾಯಿಯಿಂದ ಬೇರ್ಪಟ್ಟ ಮರಿಯಾನೆ ಆಹಾರ ಹುಡುಕುತ್ತಾ ಗ್ರಾಮಕ್ಕೆ ಬಂದ ಘಟನೆ ತಮಿಳುನಾಡಿನ ಡೆಂಕಣಿಕೋಟೆ ಗಡಿಭಾಗದಲ್ಲಿ ನಡೆದಿದೆ.

ತಾಯಿ ಆನೆಯ ಗುಂಪಿನಿಂದ ದೂರವಾದ ಮರಿಯಾನೆ, ಜಮೀನಿನ ಮನೆಯೊಂದರ ಬಳಿ ಕಾಣಿಸಿಕೊಂಡಿದ್ದು ಸ್ಥಳೀಯರಲ್ಲಿ ಆತಂಕ ಉಂಟುಮಾಡಿದೆ.

ಮರಿಯಾನೆ ಆಹಾರಕ್ಕಾಗಿ ಗ್ರಾಮಕ್ಕೆ ಪ್ರವೇಶಿಸಿದ್ದು, ಖಾಸಗಿ ತೋಟದ ಮನೆಯ ಬಳಿ ಕಾಣಿಸಿಕೊಂಡಿದೆ. ಆನೆ ಕಂಡ ಸ್ಥಳೀಯರು ಕೂಡಲೇ ಜಮಾಯಿಸಿದ್ದು, ಕಬ್ಬು ಹಾಗೂ ಬಾಳೆಹಣ್ಣು ನೀಡಿ ಅದರ ಹಸಿವು ನೀಗಿಸಿದ್ದಾರೆ.

ಘಟನೆ ಕುರಿತು ಗ್ರಾಮಸ್ಥರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದು, ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದಾರೆ. ಮರಿಯಾನೆಯನ್ನು ಸುರಕ್ಷಿತವಾಗಿ ತಾಯಿ ಆನೆಯ ಗುಂಪಿಗೆ ಸೇರಿಸಲು ಅರಣ್ಯ ಇಲಾಖೆ ಹರಸಾಹಸ ನಡೆಸುತ್ತಿದೆ.

ಪ್ರಸ್ತುತ ಅರಣ್ಯ ಸಿಬ್ಬಂದಿ ತಾಯಿ ಆನೆಯ ಗುಂಪಿನ ಪತ್ತೆಗೆ ಕಾರ್ಯಾಚರಣೆ ಮುಂದುವರಿಸಿದ್ದಾರೆ ಎಂದು ತಿಳಿದುಬಂದಿದೆ.

ತೀರ್ಥಯಾತ್ರೆ ವೇಳೆ ಭೀಕರ ದುರಂತ: ಬಾವಿಗೆ ಉರುಳಿದ ಪಿಕಪ್ ವ್ಯಾನ್, ಮಹಿಳೆಯರು-ಮಕ್ಕಳು ಸೇರಿ 8 ಮಂದಿ ಸಾವು

0

ಮಹಾರಾಷ್ಟ್ರ: ಸೋಲಾಪುರ ಜಿಲ್ಲೆಯಲ್ಲಿ ತೀರ್ಥಯಾತ್ರೆಗೆ ತೆರಳುತ್ತಿದ್ದ ಭಕ್ತರ ವಾಹನ ಭೀಕರ ಅಪಘಾತಕ್ಕೀಡಾಗಿ ಮಹಿಳೆಯರು ಮತ್ತು ಮಕ್ಕಳು ಸೇರಿ 8 ಮಂದಿ ಸಾವನ್ನಪ್ಪಿರುವ ದುರ್ಘಟನೆ ನಡೆದಿದೆ.

ಮಲ್ಶಿರಾಸ್ ತಾಲ್ಲೂಕಿನ ತಂಡುಲ್ ಗ್ರಾಮದ ಸಮೀಪ ಭಾನುವಾರ ಸಂಜೆ 15 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಪಿಕಪ್ ವ್ಯಾನ್ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಬಾವಿಗೆ ಉರುಳಿ ಬಿದ್ದಿದೆ. ಪರಿಣಾಮ ಸ್ಥಳದಲ್ಲೇ ನಾಲ್ವರು ಮಹಿಳೆಯರು ಸೇರಿದಂತೆ ಒಟ್ಟು ಎಂಟು ಮಂದಿ ಮೃತಪಟ್ಟಿದ್ದಾರೆ.

ಅಪಘಾತದಲ್ಲಿ ಇನ್ನೂ ಏಳು ಮಂದಿ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ತಕ್ಷಣವೇ ರಕ್ಷಿಸಿ ಸಮೀಪದ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಗಾಯಾಳುಗಳ ಆರೋಗ್ಯ ಸ್ಥಿತಿಯ ಮೇಲೆ ವೈದ್ಯರು ನಿಗಾ ವಹಿಸಿದ್ದಾರೆ.

ಮೃತರು ಹಾಗೂ ಗಾಯಾಳುಗಳು ಪಂಢರಪುರ ಸಮೀಪದ ರಂಜನಿ ಗ್ರಾಮದ ನಿವಾಸಿಗಳಾಗಿದ್ದು, ಧಾರ್ಮಿಕ ಯಾತ್ರೆಯ ಭಾಗವಾಗಿ ಒಟ್ಟಿಗೆ ಪ್ರಯಾಣಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆಯೇ ಪೊಲೀಸರು, ಸ್ಥಳೀಯ ಆಡಳಿತ ಹಾಗೂ ರಕ್ಷಣಾ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಕಾರ್ಯಾಚರಣೆ ನಡೆಸಿದರು. ಅಪಘಾತದ ನಿಖರ ಕಾರಣ ಕುರಿತು ತನಿಖೆ ಮುಂದುವರಿದಿದೆ.

ಹೇಮಾವತಿ ನದಿಯಲ್ಲಿ ಮುಳುಗಿ ಬೆಂಗಳೂರಿನ ಮೂವರು ಯುವಕರು ದಾರುಣ ಸಾವು

0

ಹಾಸನ: ಶೆಟ್ಟಿಹಳ್ಳಿ ಚರ್ಚ್ ವೀಕ್ಷಣೆಗೆ ತೆರಳಿದ್ದ ಬೆಂಗಳೂರಿನ ಯುವಕರ ತಂಡಕ್ಕೆ ಭೀಕರ ದುರಂತ ಸಂಭವಿಸಿದ್ದು, ಹೇಮಾವತಿ ನದಿಯ ಹಿನ್ನೀರಿನಲ್ಲಿ ಈಜಲು ಇಳಿದ ಮೂವರು ಯುವಕರು ನೀರುಪಾಲಾಗಿದ್ದಾರೆ.

ಚರಣ್ (20), ಮಿಲನ್ (23) ಮತ್ತು ಮಣಿಕಂಠ (20) ಮೃತ ದುರ್ದೈವಿಗಳು. ಧರ್ಮಸ್ಥಳ ಪ್ರವಾಸ ಮುಗಿಸಿ ಬೆಂಗಳೂರಿಗೆ ಹಿಂದಿರುಗುತ್ತಿದ್ದ 10 ಮಂದಿ ಸ್ನೇಹಿತರ ತಂಡ, ಗೂಗಲ್ ಮ್ಯಾಪ್‌ನಲ್ಲಿ ಶೆಟ್ಟಿಹಳ್ಳಿ ಚರ್ಚ್ ಬಗ್ಗೆ ಮಾಹಿತಿ ತಿಳಿದು ಅಲ್ಲಿಗೆ ಭೇಟಿ ನೀಡಿತ್ತು.

ಈ ವೇಳೆ ಚರ್ಚ್ ಸಮೀಪದ ಹಿನ್ನೀರಿನಲ್ಲಿ ಈಜಲು ಇಳಿದ ಮೂವರು ಯುವಕರು ನೀರಿನ ಆಳ ಅರಿಯದೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ದಡದಲ್ಲಿದ್ದ ಸ್ನೇಹಿತರು ಸಹಾಯಕ್ಕಾಗಿ ಕೂಗಿಕೊಂಡರೂ, ಯಾರಿಗೂ ಈಜು ಬಾರದ ಕಾರಣ ಯುವಕರನ್ನು ರಕ್ಷಿಸಲು ಸಾಧ್ಯವಾಗಲಿಲ್ಲ.

ಮಾಹಿತಿ ತಿಳಿದು ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳ ಮತ್ತು ಪೊಲೀಸ್ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆ ನಡೆಸಿದ್ದು, ಇಬ್ಬರ ಮೃತದೇಹಗಳನ್ನು ಹೊರತೆಗೆದಿದ್ದಾರೆ. ಕತ್ತಲೆ ಹೆಚ್ಚಾದ ಹಿನ್ನೆಲೆಯಲ್ಲಿ ಶೋಧ ಕಾರ್ಯವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದ್ದು, ಉಳಿದ ಯುವಕನ ಮೃತದೇಹಕ್ಕಾಗಿ ಸೋಮವಾರ ಬೆಳಗ್ಗೆ ಮತ್ತೆ ಕಾರ್ಯಾಚರಣೆ ಆರಂಭಿಸಲಾಗುತ್ತದೆ.

ಪ್ರವಾಸದ ಉತ್ಸಾಹದಲ್ಲಿದ್ದ ಯುವಕರ ತಂಡಕ್ಕೆ ಈ ದುರಂತ ಆಘಾತ ಉಂಟುಮಾಡಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ.

ಮತ್ತಷ್ಟು ದುಬಾರಿಯಾದ ಗೋಲ್ಡ್: 15,000 ರೂ ಗಡಿ ದಾಟಿದ ಅಪರಂಜಿ ಚಿನ್ನದ ಬೆಲೆ!

0

ನವದೆಹಲಿ: ದೇಶದಲ್ಲಿ ಚಿನ್ನದ ಬೆಲೆ ಮತ್ತೆ ಏರಿಕೆಯ ಹಾದಿ ಹಿಡಿದಿದ್ದು, ಕಳೆದ ಕೆಲವು ವಾರಗಳಿಂದ ಕಂಡಿದ್ದ ಇಳಿಕೆಯ ಬಳಿಕ ಇದೀಗ ಸತತವಾಗಿ ಹೆಚ್ಚಳ ಕಂಡು ಬಂದಿದೆ.

ಕಳೆದ ಎರಡು ದಿನಗಳಲ್ಲಿ ಸುಮಾರು 300 ರೂ.ಗಳಷ್ಟು ಏರಿಕೆ ಕಂಡಿದ್ದ ಚಿನ್ನದ ದರ ಇಂದೂ ಸೋಮವಾರ 225 ರೂ. ಹೆಚ್ಚಾಗಿದೆ. ಅಪರಂಜಿ ಚಿನ್ನದ ಬೆಲೆ 15,000 ರೂ. ಗಡಿ ದಾಟಿದ್ದು, ಬೆಳ್ಳಿ ಬೆಲೆಯಲ್ಲೂ ಪ್ರತಿ ಗ್ರಾಂಗೆ 5 ರೂ. ಹೆಚ್ಚಳ ಕಂಡುಬಂದಿದೆ. ವಿದೇಶಿ ಮಾರುಕಟ್ಟೆಗಳಲ್ಲಿ ದರಗಳಲ್ಲಿ ದೊಡ್ಡ ಮಟ್ಟದ ವ್ಯತ್ಯಾಸ ಕಂಡುಬರದಿದ್ದರೂ, ಭಾರತದಲ್ಲಿ ಚಿನ್ನ-ಬೆಳ್ಳಿ ದರಗಳು ಏರಿಕೆಯ ಟ್ರೆಂಡ್ ಮುಂದುವರಿದಿದೆ.

ಪ್ರಸ್ತುತ 10 ಗ್ರಾಂ 22 ಕ್ಯಾರಟ್ ಚಿನ್ನದ ಬೆಲೆ ₹1,38,900 ಹಾಗೂ 24 ಕ್ಯಾರಟ್ ಅಪರಂಜಿ ಚಿನ್ನದ ಬೆಲೆ ₹1,51,530 ಆಗಿದ್ದು, 100 ಗ್ರಾಂ ಬೆಳ್ಳಿ ₹26,500ರಲ್ಲಿ ಇದೆ. ಬೆಂಗಳೂರಿನಲ್ಲಿ ಸಹ ಇದೇ ದರಗಳು ಮುಂದುವರಿದಿವೆ ಎಂದು ವರದಿಯಾಗಿದೆ.

ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ:

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 15,153 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 13,890 ರೂ
  • 18 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 11,365 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 265 ರೂ.

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ:

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 15,153 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 13,890 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 265 ರೂ.
error: Content is protected !!