Home Blog Page 182

ಬಾಂಗ್ಲಾದೇಶದಲ್ಲಿ ಮುಂದುವರಿದ ಹಿಂದೂಗಳ ಹತ್ಯೆ; ಆಟೋ ಚಾಲಕನನ್ನು ಇರಿದು ಕೊಂದ ದುಷ್ಕರ್ಮಿಗಳು

0

ಢಾಕಾ: ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತ ಹಿಂದೂ ಸಮುದಾಯದ ಮೇಲಿನ ದಾಳಿಗಳು ಮುಂದುವರಿದಿದೆ.

ದಕ್ಷಿಣ ಬಾಂಗ್ಲದ ಫೆನಿ ಜಿಲ್ಲೆಯ ಧಗನ್​ಭುಯಾನ್​ನಲ್ಲಿ ಅಪರಿಚಿತ ದುಷ್ಕರ್ಮಿಗಳು 28 ವರ್ಷದ ಆಟೋ ಚಾಲಕನನ್ನು ಇರಿದು ಹತ್ಯೆ ಮಾಡಿದ್ದಾರೆ. ಮೃತನನ್ನು ಸಮೀರ್ ಕುಮಾರ್ ದಾಸ್ ಎಂದು ಗುರುತಿಸಲಾಗಿದೆ. ವೃತ್ತಿಯಲ್ಲಿ ಆಟೋ ಚಾಲಕನಾಗಿದ್ದ ಸಮೀರ್‌ನನ್ನು ಕೊಂದು, ಆತನ ಆಟೋರಿಕ್ಷಾವನ್ನೂ ಕಳವು ಮಾಡಲಾಗಿದೆ.

ಕುಟುಂಬದವರ ಮಾಹಿತಿ ಪ್ರಕಾರ, ಭಾನುವಾರ ಸಂಜೆ ಸುಮಾರು 7 ಗಂಟೆಗೆ ಸಮೀರ್ ಆಟೋರಿಕ್ಷಾದಲ್ಲಿ ಮನೆಯಿಂದ ಹೊರಟಿದ್ದರು. ತಡರಾತ್ರಿಯಾದರೂ ಮನೆಗೆ ಮರಳದ ಹಿನ್ನೆಲೆಯಲ್ಲಿ ಆತಂಕಗೊಂಡ ಕುಟುಂಬದವರು ಹುಡುಕಾಟ ಆರಂಭಿಸಿದ್ದರು. ಬಳಿಕ ಸೋಮವಾರ ಬೆಳಗಿನ ಜಾವ ಸುಮಾರು 2 ಗಂಟೆಗೆ ಜಗತ್ಪುರ ಗ್ರಾಮದ ಹೊಲವೊಂದರಲ್ಲಿ ಸ್ಥಳೀಯರು ಸಮೀರ್‌ನ ಶವವನ್ನು ಪತ್ತೆ ಮಾಡಿದ್ದಾರೆ.

ದಗನ್‌ಭುಯಾನ್ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರ ಹೇಳಿಕೆ ಪ್ರಕಾರ, ಹತ್ಯೆಗೆ ಮನೆಯಲ್ಲಿ ತಯಾರಿಸಿದ ಹರಿತವಾದ ಆಯುಧಗಳನ್ನು ಬಳಸಲಾಗಿದೆ. ಪ್ರಾಥಮಿಕ ತನಿಖೆಯಲ್ಲಿ ಕೊಲೆ ಪೂರ್ವ ಯೋಜಿತವಾಗಿರುವ ಶಂಕೆ ವ್ಯಕ್ತವಾಗಿದ್ದು, ತನಿಖೆ ಮುಂದುವರಿದಿದೆ. ಈವರೆಗೆ ಯಾರನ್ನೂ ಬಂಧಿಸಲಾಗಿಲ್ಲ.
ಇದು ಕಳೆದ 23 ದಿನಗಳಲ್ಲಿ ಬಾಂಗ್ಲಾದೇಶದಲ್ಲಿ ನಡೆದ ಏಳನೇ ಹಿಂದೂ ಹತ್ಯೆ ಎನ್ನಲಾಗಿದೆ.

ಪತ್ನಿಗೆ ದ್ರೋಹ, ಪ್ರಿಯತಮೆ ಜೊತೆ ಪಲ್ಲಂಗದಲ್ಲಿರುವಾಗಲೇ ಸಿಕ್ಕಿಬಿದ್ದ ಟೆಕ್ಕಿ ಅರೆಸ್ಟ್!

0

ಬೆಂಗಳೂರು: ಮೊದಲ ಪತ್ನಿಗೆ ವಂಚನೆ ಮಾಡಿ ಪ್ರೇಯಸಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ಟೆಕ್ಕಿಯನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಯನ್ನು ಜೆಡ್ರೆಲಾ ಜಬ್ ಆರೂಪ್ ಅಲಿಯಾಸ್ ಜಾಕೂಬ್ ಎಂದು ಗುರುತಿಸಲಾಗಿದೆ. ಬೆಂಗಳೂರು ಡಿಸಿಆರ್‌ಇ ಪಶ್ಚಿಮ ವಿಭಾಗ ಠಾಣೆ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ಕಳೆದ ಎರಡು ವರ್ಷಗಳಿಂದ ಆರೋಪಿಯು ಪತ್ನಿಯೊಂದಿಗೆ ಬೆಂಗಳೂರಿನಲ್ಲಿ ವಾಸವಾಗಿದ್ದ. ಪತ್ನಿ ಖಾಸಗಿ ಸಂಸ್ಥೆಯೊಂದರಲ್ಲಿ ಪ್ರತಿಷ್ಠಿತ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಟೆಕ್ಕಿಯಾಗಿದ್ದ ಪತಿಗೆ ಕೆಲಸ ಇಲ್ಲದ ಹಿನ್ನೆಲೆ, ಲಕ್ಷಾಂತರ ರೂ. ಸಂಬಳ ಬರುತ್ತಿದ್ದ ತನ್ನ ಉದ್ಯೋಗವನ್ನು ಪತ್ನಿ ತ್ಯಜಿಸಿದ್ದರು ಎಂಬುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ಒಂದು ಮಗುವಾದ ಬಳಿಕ ಪತ್ನಿಗೆ ಜಾತಿ ನಿಂದನೆ ಮಾಡಿ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡಲು ಆರೋಪಿ ಆರಂಭಿಸಿದ್ದಾನೆ. ಅಲ್ಲದೆ ಗರ್ಭಪಾತ ಮಾಡಿಸಿಕೊಳ್ಳುವಂತೆ ಒತ್ತಡ ಹೇರುವ ಜೊತೆಗೆ ಹಲ್ಲೆ ನಡೆಸಿದ್ದಾನೆ ಎಂದು ಪತ್ನಿ ದೂರಿದ್ದಾರೆ. ಕಿರುಕುಳ ತಾಳಲಾರದೇ ಪತ್ನಿ, ಪತಿಯ ವಿರುದ್ಧ ಅಟ್ರಾಸಿಟಿ ಹಾಗೂ ಹಲ್ಲೆ ಪ್ರಕರಣ ದಾಖಲಿಸಿದ್ದರು. ದೂರು ಆಧರಿಸಿ ತನಿಖೆ ಕೈಗೊಂಡ ಪೊಲೀಸರು, ಆರೋಪಿ ಪ್ರೇಯಸಿಯ ಮನೆಯಲ್ಲಿ ಅಡಗಿದ್ದ ಮಾಹಿತಿ ಪಡೆದು ಅಲ್ಲಿ ದಾಳಿ ನಡೆಸಿ ಜಾಕೂಬ್‌ನನ್ನು ಬಂಧಿಸಿದ್ದಾರೆ.

ಡಿಸಿಆರ್‌ಇ ಪೊಲೀಸ್ ಠಾಣೆ ಜಾರಿಗೆ ಬಂದ ಬಳಿಕ ಕರ್ನಾಟಕದಲ್ಲಿ ಅಟ್ರಾಸಿಟಿ ಕಾಯ್ದೆಯಡಿ ನಡೆದ ಮೊದಲ ಬಂಧನ ಪ್ರಕರಣ ಇದಾಗಿದೆ.

ಏನಿದು ಡಿಸಿಆರ್‌ಇ?
ಡಿಸಿಆರ್‌ಇ ಎಂದರೆ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯ. ಕರ್ನಾಟಕದಲ್ಲಿ ಪರಿಶಿಷ್ಟ ಜಾತಿ (SC) ಮತ್ತು ಪರಿಶಿಷ್ಟ ಪಂಗಡ (ST) ದೌರ್ಜನ್ಯ ತಡೆ ಕಾಯ್ದೆಯಡಿ ದಾಖಲಾಗುವ ಜಾತಿ ನಿಂದನೆ, ದೌರ್ಜನ್ಯ ಮತ್ತು ತಾರತಮ್ಯ ಪ್ರಕರಣಗಳ ತನಿಖೆ ನಡೆಸುವ ವಿಶೇಷ ಪೊಲೀಸ್ ಘಟಕವಾಗಿದೆ.

ಸ್ಲಂ ಪ್ರದೇಶಗಳ ಅಭಿವೃದ್ಧಿಗೆ ಅನುದಾನ ಮೀಸಲಿಡಿ

0

ವಿಜಯಸಾಕ್ಷಿ ಸುದ್ದಿ, ಗದಗ: ಗದಗ-ಬೆಟಗೇರಿ ನಗರದ ಕೊಳಚೆ ಪ್ರದೇಶಗಳಲ್ಲಿ ಯಾವುದೇ ನಾಗರಿಕ ಸೌಲಭ್ಯಗಳು ಇಲ್ಲದೇ ಸ್ಥಳೀಯ ಸ್ಲಂ ನಿವಾಸಿಗಳು ಪ್ರತಿನಿತ್ಯ ಸಾಕಷ್ಟು ತೊಂದರೆಗಳನ್ನು ಅನುಭವಿಸುತ್ತಿದ್ದಾರೆ. ನಗರದ ಶೇ.90ರಷ್ಟು ಕೊಳಗೇರಿ ಜನರು ನಗರಸಭೆಗೆ ತಮ್ಮ ಆಸ್ತಿ ತೆರಿಗೆಯನ್ನು ಕಟ್ಟುತ್ತಾರೆ. ಆದರೆ ನಗರಸಭೆಯಿಂದ ಸ್ಲಂ ಪ್ರದೇಶಗಳ ಅಭಿವೃದ್ಧಿಯಲ್ಲಿ ತಾರತಮ್ಯ ನೀತಿಯನ್ನು ಅನುಸರಿಸಲಾಗುತ್ತಿದೆ. ಈ ಬಾರಿ 2026-27ರ ಸಾಲಿನ ಬಜೆಟ್‌ನಲ್ಲಿ ಗದಗ-ಬೆಟಗೇರಿ ಅವಳಿ ನಗರದ ಕೊಳಗೇರಿ ಪ್ರದೇಶಗಳ ಅಭಿವೃದ್ಧಿಗಾಗಿ ಪ್ರತ್ಯೇಕ ಅನುದಾನ ಮೀಸಲಿಡಬೇಕೆಂದು ಗದಗ ಜಿಲ್ಲಾ ಸ್ಲಂ ಸಮಿತಿ ಅಧ್ಯಕ್ಷ ಇಮ್ತಿಯಾಜ ಆರ್.ಮಾನ್ವಿ ಒತ್ತಾಯಿಸಿದರು.

ಅವರು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಕರೆದ ನಗರಸಭೆಯ 2026-27ನೇ ಸಾಲಿನ ಬಜೆಟ್ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.

ಕೇವಲ ಕಾಟಾಚಾರಕ್ಕಾಗಿ ಬಜೆಟ್ ಪೂರ್ವಭಾವಿ ಸಭೆ ಆಗಬಾರದು. ನಗರದ ಸರ್ವಾಂಗೀಣ ಅಭಿವೃದ್ಧಿಗಾಗಿ ಬಜೆಟ್‌ನಲ್ಲಿ ಆದ್ಯತೆ ನೀಡಬೇಕು. ಕೊಳಗೇರಿ ಪ್ರದೇಶಗಳಲ್ಲಿ ರಸ್ತೆ, ಚರಂಡಿ, ಶೌಚಾಲಯ ಹಾಗೂ ಕುಡಿಯುವ ನೀರಿನ ಪರ್ಯಾಯ ವ್ಯವಸ್ಥೆಗಾಗಿ ಅನುದಾನ ಮೀಸಲಿಡಬೇಕು. ಪ್ರತ್ಯೇಕ ಶೌಚಾಲಯಗಳನ್ನು ನಿರ್ಮಿಸಿಕೊಳ್ಳಲು ಸ್ಲಂ ಪ್ರದೇಶಗಳಿಗೆ ಆದ್ಯತೆ ನೀಡಬೇಕು. ಗದಗದಿಂದ ಬೆಟಗೇರಿ ಕಡೆಗೆ ಹೋಗುವ ಅಂಡರ್ ಬ್ರಿಡ್ಜ್ ಬದಲಾಗಿ ಮೇಲ್ಸೇತುವೆ ನಿರ್ಮಾಣ ಮಾಡುವ ಮೂಲಕ ಸಾರ್ವಜನಿಕರ ಸಂಚಾರಕ್ಕೆ ಅನುಕೂಲ ಮಾಡಲು ಕ್ರಮ ಕೈಗೊಳ್ಳಬೇಕೆಂದು ಸಭೆಯಲ್ಲಿ ಒತ್ತಾಯಿಸಿದರು.

ಸ್ಲಂ ಸಮಿತಿ ಉಪಾಧ್ಯಕ್ಷ ಅಶೋಕ ಕುಡತಿನ್ನಿ, ಕಾರ್ಯದರ್ಶಿ ಅಶೋಕ ಕುಸಬಿ, ಪರವೀನಬಾನು ಹವಾಲ್ದಾರ, ಮೌಲಾಸಾಬ ಗಚ್ಚಿ, ಇಬ್ರಾಹಿಂ ಮುಲ್ಲಾ, ಮಂಜುನಾಥ ಶ್ರೀಗಿರಿ, ಮೆಹಬೂಬಸಾಬ ಬಳ್ಳಾರಿ, ಸಲೀಂ ಹರಿಹರ, ಖಾಜಾಸಾಬ ಇಸ್ಮಾಯಿಲನವರ, ಶರಣಪ್ಪ ಸೂಡಿ, ಮಕ್ತುಮಸಾನ ಮುಲ್ಲಾನವರ ಉಪಸ್ಥಿತರಿದ್ದರು.

ಗಣರಾಜ್ಯೋತ್ಸವ ಧ್ವಜಾರೋಹಣಕ್ಕೆ ಸೀಮಿತವಾಗದಿರಲಿ: ಜಿಲ್ಲಾಧಿಕಾರಿ ದಿವ್ಯ ಪ್ರಭು 

0

ವಿಜಯಸಾಕ್ಷಿ ಸುದ್ದಿ, ಧಾರವಾಡ: ಜನವರಿ 26ರಂದು ಜರುಗುವ ಗಣರಾಜ್ಯೋತ್ಸವವನ್ನು ಜಿಲ್ಲೆಯಲ್ಲಿ ಅರ್ಥಪೂರ್ಣವಾಗಿ ಆಚರಿಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದ್ದು, ಕೇವಲ ಧ್ವಜಾರೋಹಣಕ್ಕೆ ಸೀಮಿತವಾಗದೆ, ಸಂವಿಧಾನದ ಆಶಯಗಳನ್ನು ಸಾರುವ ನಿಟ್ಟಿನಲ್ಲಿ ಈ ಬಾರಿ ಕಾರ್ಯಕ್ರಮಗಳು ಅಚ್ಚುಕಟ್ಟಾಗಿ ಮೂಡಿಬರಬೇಕು. ಪೊಲೀಸ್, ಶಿಕ್ಷಣ ಹಾಗೂ ಇತರ ಇಲಾಖೆಗಳು ತಮಗೆ ವಹಿಸಿದ ಕಾರ್ಯಗಳನ್ನು ನಿರ್ವಹಿಸಬೇಕೆಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಹೇಳಿದರು.

ಅವರು ಸೋಮವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಗಣರಾಜ್ಯೋತ್ಸವ ಆಚರಣೆಯ ಪೂರ್ವಭಾವಿ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ನಗರದ ಪ್ರಮುಖ ವೃತ್ತಗಳು ಮತ್ತು ಸರ್ಕಾರಿ ಕಟ್ಟಡಗಳನ್ನು ದೀಪಾಲಂಕಾರದಿಂದ ಅಲಂಕರಿಸುವುದು ಹಾಗೂ ಸ್ವಚ್ಛತೆಯನ್ನು ಕಾಪಾಡುವುದು ಮುಖ್ಯವಾಗಿದೆ. ಗಣರಾಜ್ಯೋತ್ಸವವು ರಾಷ್ಟ್ರೀಯ ಹಬ್ಬವಾಗಿದ್ದು, ಇದರಲ್ಲಿ ಯಾವುದೇ ರೀತಿಯ ಲೋಪದೋಷಗಳಿಗೆ ಅವಕಾಶ ನೀಡಬಾರದು. ಮುಂಜಾಗ್ರತಾ ಕ್ರಮವಾಗಿ ಆಚರಣೆಯ ರೂಪುರೇಷೆಗಳ ಬಗ್ಗೆ ಅಧಿಕಾರಿಗಳು ಗಮನವಹಿಸಬೇಕು ಎಂದು ಹೇಳಿದರು.

ಗಣರಾಜ್ಯೋತ್ಸವದಂದು ಬೆಳಿಗ್ಗೆ 7.30 ಗಂಟೆಗೆ ಶಾಲಾ-ಕಾಲೇಜುಗಳಲ್ಲಿ, ಸರಕಾರಿ ಕಚೇರಿಗಳಲ್ಲಿ ಧ್ವಜಾರೋಹಣ ನೆರವೇರಿಸಿ, 8.30 ಗಂಟೆಗೆ ಆರ್.ಎನ್. ಶೆಟ್ಟಿ ಜಿಲ್ಲಾ ಕ್ರೀಡಾಂಗಣದಲ್ಲಿ ಸಾರ್ವಜನಿಕರು, ಸರಕಾರಿ ನೌಕರರು ಸೇರಬೇಕು. 8.55 ಗಂಟೆಗೆ ಮುಖ್ಯ ಅತಿಥಿಗಳಾಗಿರುವ ಜಿಲ್ಲಾ ಉಸ್ತುವಾರಿ ಸಚಿವರು ಜಿಲ್ಲಾ ಕ್ರೀಡಾಂಗಣಕ್ಕೆ ಆಗಮಿಸುತ್ತಾರೆ. 9 ಗಂಟೆಗೆ ಮುಖ್ಯ ಅತಿಥಿಗಳಿಂದ ರಾಷ್ಟ್ರ ಧ್ವಜಾರೋಹಣ ಮತ್ತು ವಿವಿಧ ದಳಗಳ ವೀಕ್ಷಣೆ ಜರುಗುತ್ತದೆ.

ವೇದಿಕೆಯಲ್ಲಿದ್ದ ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ ಮಾತನಾಡಿದರು. ಸಭೆಯಲ್ಲಿ ಜಿಲ್ಲಾ ಪಂಚಾಯಿತಿ, ಪೊಲೀಸ್ ಇಲಾಖೆ, ಲೋಕೋಪಯೋಗಿ, ಮಹಾನಗರ ಪಾಲಿಕೆ, ಶಾಲಾ ಶಿಕ್ಷಣ, ಪದವಿ, ಪದವಿಪೂರ್ವ ಶಿಕ್ಷಣ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು.

ಮುಖ್ಯ ಅತಿಥಿಗಳಿಗೆ ಗೌರವ ರಕ್ಷೆ ನೀಡುವ ವಿದ್ಯಾರ್ಥಿ ಹಾಗೂ ವಿವಿಧ ಇಲಾಖೆಗಳ ದಳಗಳ ಆಯ್ಕೆ ಮತ್ತು ತರಬೇತಿಯನ್ನು ಪೊಲೀಸ್ ಇಲಾಖೆಯಿಂದ ಮಾಡಲಾಗುತ್ತದೆ. ಕ್ರೀಡಾಂಗಣದ ಸಿದ್ಧತೆ ಸೇರಿದಂತೆ ವಿವಿಧ ಕಾರ್ಯಗಳನ್ನು ಇಲಾಖೆಗಳಿಗೆ ಹಂಚಿಕೆ ಮಾಡಲಾಗಿದ್ದು, ಎಲ್ಲರೂ ಅಚ್ಚುಕಟ್ಟಾಗಿ ತಮ್ಮ ಕರ್ತವ್ಯಗಳನ್ನು ನಿರ್ವಹಿಸಬೇಕೆಂದು ಜಿಲ್ಲಾಧಿಕಾರಿಗಳು ತಿಳಿಸಿದರು.

ಗಾಳಿ ಮಾತುಗಳು ಎಲ್ಲವೂ ಸುಳ್ಳು: ಡಿಸಿ ಸಿ.ಎನ್. ಶ್ರೀಧರ್ ಸ್ಪಷ್ಟನೆ

0

ವಿಜಯಸಾಕ್ಷಿ ಸುದ್ದಿ, ಗದಗ: ಲಕ್ಕುಂಡಿಯಲ್ಲಿ ಸಿಕ್ಕಿರುವುದು ನಿಧಿಯಲ್ಲ ಎಂದು ಭಾರತೀಯ ಪುರಾತತ್ವ ಇಲಾಖೆ ಅಧಿಕಾರಿ ರಮೇಶ್ ಮೂಲಿಮನಿ ಹೇಳಿಕೆ ನೀಡಿದ್ದರು. ಇದು ಬಾಯ್ತಪ್ಪಿನಿಂದ ಆದ ಹೇಳಿಕೆಯಾಗಿದೆ. ಸಿಕ್ಕಿರುವ ಒಡವೆಗಳು 100ಕ್ಕೂ ಹೆಚ್ಚು ವರ್ಷ ಹಳೆಯದಾಗಿದೆ. ಈ ಬಗ್ಗೆ ಇನ್ನೂ ಹೆಚ್ಚಿನ ತನಿಖೆ ನಡೆಯುತ್ತಿದೆ. ತನಿಖೆಯ ನಂತರ ಯಾವ ಕಾಲದ್ದು, ಎಷ್ಟು ಹಳೆಯದು ಎನ್ನುವ ಮಾಹಿತಿ ಸಿಗಲಿದೆ. ತಪ್ಪು ಮಾಹಿತಿ ನೀಡಿದ ಪುರಾತತ್ವ ಇಲಾಖೆ ಅಧಿಕಾರಿಯ ಹೇಳಿಕೆಯ ಕುರಿತು ಸರ್ಕಾರದ ಗಮನಕ್ಕೆ ತರಲಾಗುವುದು ಎಂದು ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ಹೇಳಿದರು.

ನಗರದ ಜಿಲ್ಲಾಧಿಕಾರಿ ಕಚೇರಿಯ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸಿಕ್ಕ ಚಿನ್ನವನ್ನು ರಿತ್ತಿ ಕುಟುಂಬಸ್ಥರು ಜಿಲ್ಲಾಡಳಿತಕ್ಕೆ ನೀಡುವ ಮೂಲಕ ಪ್ರಾಮಾಣಿಕತೆ ಮರೆದಿದ್ದಾರೆ. ಸರ್ಕಾರದ ಜೊತೆ ಚರ್ಚೆ ನಡೆಸಿ ಕುಟುಂಬಸ್ಥರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಲಾಗುವುದು. ಮಂಗಳವಾರ ರಾಜ್ಯ ಪುರಾತತ್ವ ಇಲಾಖೆಯ ಸ್ಮಿತಾ ರೆಡ್ಡಿ ಸ್ಥಳಕ್ಕೆ ಆಗಮಿಸಲಿದ್ದಾರೆ. ಅವರು ನಡೆಸುವ ತನಿಖೆಯಿಂದ ಈ ಕುರಿತು ಇನ್ನಷ್ಟು ಮಾಹಿತಿಗಳು ಲಭ್ಯವಾಗಲಿವೆ ಎಂದರು.

ಸ್ಥಳದಲ್ಲಿ ಒಟ್ಟು 470 ಗ್ರಾಂ ಬಂಗಾರದ ಒಡವೆಗಳು ಸಿಕ್ಕಿವೆ. ಜಿಲ್ಲಾಡಳಿತದಿಂದ ಈಗಾಗಲೇ ಸ್ಥಳಕ್ಕೆ ತೆರಳಿ ಮಹಜರು ಮಾಡಲಾಗಿದೆ. ಚಿನ್ನದ ತೂಕದ ಬಗ್ಗೆ ಹಲವು ದ್ವಂದ್ವ ಹೇಳಿಕೆಗಳು ಕೇಳಿ ಬರುತ್ತಿವೆ. ಗಾಳಿ ಮಾತುಗಳು ಎಲ್ಲವೂ ಸುಳ್ಳು. ಪ್ರಜ್ವಲ್ ಎನ್ನುವ ಹುಡುಗ ಚಿನ್ನವನ್ನು ಜಿಲ್ಲಾಡಳಿತಕ್ಕೆ ನೀಡಿದ್ದಾನೆ. ಈಗಾಗಲೇ ಆ ಹುಡುಗನಿಗೆ ಸನ್ಮಾನ ಮಾಡಲಾಗಿದೆ. ಬಹುಮಾನ ನೀಡುವ ಕುರಿತು ಇನ್ನೂ ಚರ್ಚೆ ಆಗಿಲ್ಲ. ಸರ್ಕಾರದ ಹಂತದಲ್ಲಿ ಚರ್ಚೆ ನಂತರ ಬಹುಮಾನ ನೀಡುವ ಬಗ್ಗೆ ತೀರ್ಮಾನ ಮಾಡಲಾಗುವುದು ಎಂದರು.

ಭಾರತೀಯ ಪುರಾತತ್ವ ಇಲಾಖೆಯ ಅಧಿಕಾರಿ ರಮೇಶ್ ಮೂಲಿಮನಿ ಮಾತನಾಡಿ, ಚಿನ್ನ ಸಿಕ್ಕಿದೆ ಎನ್ನುವ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ತೆರಳಿದ್ದೆ. ಅಲ್ಲಿ ಸಿಕ್ಕ ಅವಶೇಷಗಳು 100 ವರ್ಷ ಮೇಲ್ಪಟ್ಟದ್ದಾಗಿವೆ ಎಂದು ಅಂದಾಜು ಮಾಡಲಾಯಿತು. ಕರ್ನಾಟಕ ನಿಕ್ಷೇಪ ನಿಧಿಯ ಅಡಿಯಲ್ಲಿ ಭೂಮಿಯ ಆಳದಲ್ಲಿ 10 ರೂಪಾಯಿಗಿಂತ ಹೆಚ್ಚಿನ ವಸ್ತುಗಳು ಏನೇ ಸಿಕ್ಕರೂ 1962ರ ಕಾಯ್ದೆಯ ಪ್ರಕಾರ ಸರ್ಕಾರಕ್ಕೆ ಸೇರಿದ್ದು ಎನ್ನುವ ಕಾನೂನು ಇದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಲಕ್ಕುಂಡಿ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಸಿದ್ದಲಿಂಗೇಶ ಪಾಟೀಲ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹನ್ ಜಗದೀಶ್, ವಾರ್ತಾಧಿಕಾರಿ ವಸಂತ ಮಡ್ಲೂರ, ಡಾ. ಆರ್. ಶ್ರೀಜೇಶ್ ಮುಂತಾದವರು ಉಪಸ್ಥಿತರಿದ್ದರು.

ಲಕ್ಕುಂಡಿಯಲ್ಲಿ ಸಿಕ್ಕಿರುವುದು ನಿಧಿ ಅಲ್ಲ ಎಂದು ಪುರಾತತ್ವ ಇಲಾಖೆಯ ಅಧಿಕಾರಿ ರಮೇಶ್ ಮೂಲಿಮನಿ ಭಾನುವಾರವಷ್ಟೇ ಹೇಳಿಕೆ ನೀಡಿದ್ದರು. ಆದರೆ, ಈಗ ತಮ್ಮ ಹೇಳಿಕೆಯಿಂದ ಯು ಟರ್ನ್ ಹೊಡೆದಿದ್ದಾರೆ. ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾಧ್ಯಮ ಪ್ರತಿನಿಧಿಗಳು ಪ್ರಶ್ನಿಸಿದರೂ ರಮೇಶ್ ಮೂಲಿಮನಿ ಮೌನಕ್ಕೆ ಶರಣಾಗಿದ್ದರು. ಪುರಾತತ್ವ ಇಲಾಖೆಯ ಅಧಿಕಾರಿಯ ದ್ವಂದ್ವ ಹೇಳಿಕೆಯಿಂದ ಸಾರ್ವಜನಿಕರಲ್ಲಿ ಗೊಂದಲದ ವಾತಾವರಣ ಸೃಷ್ಟಿಯಾಗಿರುವುದಂತೂ ಸತ್ಯ.

ಜಿ.ರಾಮ್ ಜಿ ಕಾಯ್ದೆ ಜಾರಿಗೊಳಿಸಿದ್ದು ಸ್ವಾಗತಾರ್ಹ: ಶಾಸಕ ಸಿ.ಸಿ ಪಾಟೀಲ

0

ವಿಜಯಸಾಕ್ಷಿ ಸುದ್ದಿ, ಗದಗ: ಈ ಹಿಂದೆ ಇದ್ದ ಮನರೇಗಾ ಯೋಜನೆಯ ಲೋಪ-ದೋಷ ಸರಿಪಡಿಸಿ ರೈತರಿಗೆ, ಕೃಷಿ ಕಾರ್ಮಿಕರಿಗೆ ಅನುಕೂಲವಾಗುವಂತೆ ಜಿ.ರಾಮ್ ಜಿ ಕಾಯ್ದೆ ಜಾರಿಗೊಳಿಸಿದ್ದು ಸ್ವಾಗತಾರ್ಹ ಎಂದು ಮಾಜಿ ಸಚಿವ, ಹಾಲಿ ಶಾಸಕ ಸಿ.ಸಿ ಪಾಟೀಲ ಹೇಳಿದರು.

ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಈ ಹಿಂದೆ ಮನರೇಗಾ ಯೋಜನೆಯ ಹಣ ವಿಳಂಬವಾಗುತ್ತಿತ್ತು. ಕಾಯ್ದೆ ತಿದ್ದುಪಡಿ ಆದ ನಂತರ ವಿಳಂಬವಾಗುವುದಿಲ್ಲ. ಸಿದ್ದರಾಮಯ್ಯ ಈ ಕಾಯ್ದೆಯನ್ನು ವಿರೋಧ ಮಾಡುತ್ತಾರೆ. ತಮ್ಮ ಸರ್ಕಾರದ ಹುಳುಕು ಹೊರಬರುತ್ತದೆ ಎನ್ನುವ ಭಯ ಅವರಲ್ಲಿ ಕಾಡುತ್ತಿದೆ. ಕೇಂದ್ರ ಸರ್ಕಾರ ಲೋಕಸಭೆಯಲ್ಲಿ ಮಂಡಿಸಿ, ಅನುಮೋದನೆ ಪಡೆದು, ರಾಜ್ಯಸಭೆಯಲ್ಲಿಯೂ ಮಂಡಿಸಿ ಅನುಮೋದನೆ ಪಡೆದು ತಿದ್ದುಪಡಿ ಮಾಡಲಾಗಿದೆ ಎಂದರು.

ಭಾರತೀಯ ಜನತಾ ಪಕ್ಷದ ವತಿಯಿಂದ ಜಿಲ್ಲಾ ಸಮ್ಮೇಳನ, ತಾಲೂಕು, ಗ್ರಾಮ ಮಟ್ಟದ ಸಭೆ ನಡೆಸಿ ಜಿ.ರಾಮ್ ಜಿ ಕಾಯ್ದೆ ಕುರಿತು ಜನರಿಗೆ ಹಾಗೂ ಕೃಷಿಕರಿಗೆ ಮನವರಿಕೆ ಮಾಡಿಕೊಡಲಾಗುವುದು ಎಂದು ತಿಳಿಸಿದರು.

ವಿ.ಪ ಸದಸ್ಯ ಎಸ್.ವಿ. ಸಂಕನೂರ ಮಾತನಾಡಿ, ಮನರೇಗಾ ಯೋಜನೆಯ ಲೋಪದೋಷ ಗುರುತಿಸಿ ವಿಕಸಿತ ಭಾರತ ಕಾಯ್ದೆ ಜಾರಿಗೆ ತರಲಾಗಿದೆ. ಮನರೇಗಾದಿಂದ ಭ್ರಷ್ಟಾಚಾರ ಮಾಡಲು ಅನುಕೂಲವಾಗುತ್ತಿತ್ತು. ರೈತರು ಬಿತ್ತನೆ ಮಾಡುವ ಸಮಯದಲ್ಲಿ ಮನರೇಗಾ ಕಾರ್ಯ ಆರಂಭವಾಗುತ್ತಿತ್ತು. ನೂತನ ಕಾಯ್ದೆಯಿಂದ 60 ದಿನಗಳ ಕಾಲ ಕಡ್ಡಾಯವಾಗಿ ರಜೆ ನೀಡಬೇಕು ಎಂದು ವಿವರಿಸಿದರು.

1980ರಲ್ಲಿ ಎನ್‌ಆರ್‌ಇಜಿ ಎಂದು ಈ ಯೋಜನೆಯ ಹೆಸರಿತ್ತು. ನಂತರ ಮನರೇಗಾ ಎಂದು ಹೆಸರು ಬದಲಾಯಿಸಲಾಯಿತು. ಕಾಂಗ್ರೆಸ್ ತಪ್ಪು ಸಂದೇಶವನ್ನು ನೀಡುತ್ತಿದೆ. ಗಾಂಧಿಜಿಯವರ ರಾಮರಾಜ್ಯ ಕನಸು ನನಸು ಮಾಡಲು ನರೇಂದ್ರ ಮೋದಿ ಹೆಸರು ಬದಲಾವಣೆ ಮಾಡಿರುವುದು ಸ್ವಾಗತಾರ್ಹ ಎಂದರು.

ಈ ಸಂದರ್ಭದಲ್ಲಿ ಭಾರತೀಯ ಜನತಾ ಪಕ್ಷದ ಗದಗ ಜಿಲ್ಲಾಧ್ಯಕ್ಷ ರಾಜು ಕುರಡಗಿ, ನಗರಸಭೆ ಮಾಜಿ ಅಧ್ಯಕ್ಷೆ ಉಷಾ ದಾಸರ, ನಿರ್ಮಲಾ ಕೊಳ್ಳಿ, ಎಂ.ಎ. ಹಿರೇಮಠ, ಎಂ.ಎಸ್. ಕರಿಗೌಡ್ರ, ರವಿ ದಂಡಿನ್, ಲಿಂಗರಾಜಗೌಡ ಪಾಟೀಲ, ದತ್ತಣ್ಣ ಜೋಶಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಪಂಚಾಯತ್ ರಾಜ್ ವ್ಯವಸ್ಥೆಯ ಅಧಿಕಾರ ಮೊಟಕುಗೊಳಿಸಲಾಗುತ್ತದೆ ಎಂದು ಕಾಂಗ್ರೆಸ್ ಆರೋಪ ಮಾಡುತ್ತಿದೆ. ಇದು ಶುದ್ಧ ಸುಳ್ಳು. ನೀರಿನ ಸುರಕ್ಷತೆ ಕಾಮಗಾರಿ, ಗ್ರಾಮೀಣ ಮೂಲ ಸೌಕರ್ಯ ರೂಪಿಸುವುದು, ಜೀವನೋಪಾಯಕ್ಕೆ ಬೇಕಾಗಿರುವ ವ್ಯವಸ್ಥೆ ಕಲ್ಪಿಸುವುದು, ಹವಾಮಾನ ವೈಪರಿತ್ಯದಿಂದ ಆಗುವ ಅನಾಹುತ ಸರಿಪಡಿಸುವುದನ್ನು ನೂತನ ಕಾಯ್ದೆಯಲ್ಲಿ ಜಾರಿಗೆ ತರಲಾಗಿದೆ”

  • ಎಸ್.ವಿ. ಸಂಕನೂರು.
    ವಿ.ಪ ಸದಸ್ಯರು.

ಶಾಸಕರಾದರೆ ವೈಯಕ್ತಿಕ ಜೀವನ ಇರಲ್ವಾ? ಅಶ್ಲೀಲ ಮೆಸೇಜ್ ಮಾಡುವ ಪುಂಡರ ವಿರುದ್ಧ ಗುಡುಗಿದ ನಯನಾ ಮೋಟಮ್ಮ!

0

ಚಿಕ್ಕಮಗಳೂರು:- ಮೂಡಿಗೆರೆ ಶಾಸಕಿ ನಯನಾ ಮೋಟಮ್ಮ ಅವರಿಗೆ ಫೇಸ್‌ಬುಕ್ ಹಾಗೂ ಇನ್‌ಸ್ಟಾಗ್ರಾಂನಲ್ಲಿ ಅಶ್ಲೀಲ ಹಾಗೂ ಅವಮಾನಕಾರಿ ಮೆಸೇಜ್‌ಗಳ ಕಾಟ ಹೆಚ್ಚಾಗಿದೆ.

ಇದರಿಂದ ಬೇಜಾರಾಗಿರುವ ಅವರು, ಈಗಾಗಲೇ ಓರ್ವನ ವಿರುದ್ಧ ದೂರು ನೀಡಿ ಜೈಲಿಗೆ ಕಳುಹಿಸಿದ್ದರೂ, ಇನ್ನು ಮುಂದೆ ಇಂತಹ ವಿಷಯಗಳ ಬಗ್ಗೆ ತಲೆಕೆಡಿಸಿಕೊಳ್ಳದೆ ತಮ್ಮ ಕೆಲಸವನ್ನು ಮಾಡಿಕೊಂಡು ಹೋಗುತ್ತೇನೆ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಕೆಲವರು “ಎಂಎಲ್‌ಎ ಪದವಿ ಪಾರ್ಟ್‌ಟೈಂ, ಸೋಶಿಯಲ್ ಮೀಡಿಯಾ ಫುಲ್‌ಟೈಂ”, “ರಸ್ತೆಗೆ ಜಲ್ಲಿ ಹಾಕಿ ಹಾಗೇ ಬಿಟ್ಟಿದ್ದೀರಲ್ಲ”, “ಇವರೇನು ಶಾಸಕರೋ ಅಥವಾ ಸೋಶಿಯಲ್ ಮೀಡಿಯಾ ಇನ್‌ಫ್ಲೂಯೆನ್ಸರೋ” ಎನ್ನುವ ರೀತಿಯ ಅವಮಾನಕಾರಿ ಹಾಗೂ ವೈಯಕ್ತಿಕ ಟೀಕೆಗಳನ್ನು ಮಾಡುತ್ತಿದ್ದಾರೆ. ಇದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಶಾಸಕಿ, “ಶಾಸಕರಾದ ಕೂಡಲೇ ನಮಗೆ ವೈಯಕ್ತಿಕ ಜೀವನ ಇರಲ್ವಾ? ಗಂಡ–ಮಕ್ಕಳು, ಸಂಸಾರ, ಸ್ನೇಹಿತರು ಇರಲ್ವಾ? ನಾವು ಕೆಲಸ ಮಾಡುತ್ತಿಲ್ಲವಾ?” ಎಂದು ಪ್ರಶ್ನಿಸಿದ್ದಾರೆ.

ಶಾಸಕಿ ನಯನಾ ಮೋಟಮ್ಮ ಅವರು ಪರ್ಸನಲ್ ಹಾಗೂ ರಾಜಕೀಯ ಉದ್ದೇಶಕ್ಕಾಗಿ ಎರಡು ಇನ್‌ಸ್ಟಾಗ್ರಾಂ ಖಾತೆಗಳನ್ನು ಹೊಂದಿದ್ದು, ಪರ್ಸನಲ್ ಖಾತೆಗೆ ಕೆಟ್ಟ ಕಾಮೆಂಟ್‌ಗಳನ್ನು ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ. “ವ್ಯಾಯಾಮ ಮಾಡಿದ್ರೆ ತಪ್ಪಾ? ಬರ್ತ್‌ಡೇ ಆಚರಿಸಿದ್ರೆ ತಪ್ಪಾ? ವಿಶೇಷವಾಗಿ ನಾನು ಮಹಿಳೆಯರ ಪರ ಧ್ವನಿ ಎತ್ತಿದ್ದಕ್ಕೆ ಈ ಟೀಕೆಗಳು ಬರುತ್ತಿವೆ” ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಅಶ್ಲೀಲ ಕಾಮೆಂಟ್‌ಗಳ ವಿರುದ್ಧ ಕಾರ್ಯಕರ್ತರು ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡ ಮೂಡಿಗೆರೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. “ನಾನು ಧೈರ್ಯವಾಗಿ ಜೀವನ ಮಾಡ್ತೇನೆ. ನನಗೆ ಯಾರ ಭಯವೂ ಇಲ್ಲ. ಇಂತಹ ವಿಷಯಗಳಿಗೆ ಮತ್ತೆ ದೂರು ಕೊಡೋದಿಲ್ಲ. ಎಲ್ಲವನ್ನೂ ಧೈರ್ಯದಿಂದ ಎದುರಿಸುತ್ತೇನೆ” ಎಂದು ಶಾಸಕಿ ಗುಡುಗಿದ್ದಾರೆ.
ರಾಜಕೀಯ ಪ್ರವೇಶಕ್ಕೂ ಮುನ್ನ ನಾನು ಹೇಗಿದ್ದೆನೋ, ಈಗಲೂ ಅದೇ ರೀತಿ ಇರಲು ಪ್ರಯತ್ನಿಸುತ್ತೇನೆ. ರಾಜಕೀಯದಲ್ಲಿಯೂ ಯಾವುದೇ ಮುಚ್ಚುಮರೆ ಇರಬಾರದು ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಡೆಂಟಲ್ ವಿದ್ಯಾರ್ಥಿನಿ ಯಶಸ್ವಿನಿ ಆತ್ಮಹತ್ಯೆ ಕೇಸ್: 6 ಉಪನ್ಯಾಸಕರು ಕೆಲಸದಿಂದ ವಜಾ!

0

ಬೆಂಗಳೂರು:- ರಾಜಧಾನಿ ಬೆಂಗಳೂರಿನ ಚಂದಾಪುರದಲ್ಲಿ ಇತ್ತೀಚೆಗೆ ಡೆಂಟಲ್ ವಿದ್ಯಾರ್ಥಿನಿ ಯಶಸ್ವಿನಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಕಾಲೇಜಿನ 6 ಉಪನ್ಯಾಸಕರನ್ನು ಕೆಲಸದಿಂದ ವಜಾ ಮಾಡಲಾಗಿದೆ.

ಯಶಸ್ವಿನಿ ಆತ್ಮಹತ್ಯೆ ಬೆನ್ನಲ್ಲೇ ಕಾಲೇಜು ಅಧ್ಯಾಪಕರ ಕಿರುಕುಳವೇ ಮಗಳ ಸಾವಿಗೆ ಕಾರಣ ಎಂದು ಪೋಷಕರು ಗಂಭೀರ ಆರೋಪ ಮಾಡಿದ್ದಾರೆ. ಈ ಸಂಬಂಧ ಐವರ ವಿರುದ್ಧ ಎಫ್‌ಐಆರ್ ದಾಖಲಾಗಿದ್ದು, ಮತ್ತೊಂದೆಡೆ ಯಶಸ್ವಿನಿ ಸಾವಿಗೆ ನ್ಯಾಯಬೇಕೆಂದು ಸಹಪಾಠಿಗಳು ಪ್ರತಿಭಟನೆ ನಡೆಸಿದ್ದಾರೆ. ಇದರ ಬೆನ್ನಲ್ಲೇ ಕೆಲಸದಿಂದ ಆರು ಉಪನ್ಯಾಸಕರನ್ನು ವಜಾ ಮಾಡಲಾಗಿದೆ.

ವಜಾಗೊಂಡ ಉಪನ್ಯಾಸಕರನ್ನು ಒಎಂಆರ್‌ ವಿಭಾಗದ ಲೆಕ್ಚರರ್ಸ್‌ಗಳಾದ ಡಾ.ಅನಿಮೋಲ್, ಡಾ.ಶಬಾನಾ, ಡಾ.ಫೈಕಾ, ಡಾ.ಸಿಂಧು, ಡಾ.ಸುಶ್ಮಿನಿ, ಡಾ.ಅಲ್ಬಾ ಎಂದು ಗುರುತಿಸಲಾಗಿದೆ.

ಸಹಪಾಠಿಗಳ ಮುಂದೆ ಯಶಸ್ವಿನಿ ಮೈಬಣ್ಣ ಹಾಗೂ ಡ್ರೆಸ್‌ ಬಗ್ಗೆ ಟೀಕೆ ಆರೋಪ ಕೇಳಿಬಂದಿದೆ. ಕಪ್ಪು ಬಣ್ಣದ ನೀನು ಡಾಕ್ಟರ್ ಆಗಬೇಕಾ? ಎಂದು ಅವಮಾನ ಮಾಡಲಾಗಿತ್ತು. ಇದರಿಂದ ಮನನೊಂದು ಯಶಸ್ವಿನಿ ಆತ್ಮಹತ್ಯೆಗೆ ಶರಣಾಗಿದ್ದಳು ಎಂದು ಆರೋಪಿಸಲಾಗಿತ್ತು. ಕಣ್ಣು ನೋವು ಎಂದು ಒಂದು ದಿನ ಕಾಲೇಜಿಗೆ ರಜೆ ಹಾಕಿದ್ದಕ್ಕೆ ಸೆಮಿನಾರ್, ರೆಡಿಯಾಲಜಿ ಕೇಸ್ ನೀಡದೆ ಕೊಂಕು ಮಾತುಗಳಿಂದ ನಿಂದನೆ ಮಾಡಲಾಗಿತ್ತು ಎನ್ನಲಾಗಿದೆ.

ಜನ್ಮದಿನಾಚರಣೆಗೆ, ಜನಸೇವೆಗೆ ಒಂದೇ ವೇದಿಕೆ!

0

ವಿಜಯಸಾಕ್ಷಿ ಸುದ್ದಿ, ಡಂಬಳ: ಜನಪರ ಕಾರ್ಯಗಳೊಂದಿಗೆ ರೋಣ ಕ್ಷೇತ್ರದಲ್ಲಿ ಹೆಸರು ಮಾಡಿರುವ ಶಾಸಕ ಜಿ.ಎಸ್. ಪಾಟೀಲರ ಪುತ್ರ, ರೋಣ ತಾಲೂಕಾ ಗ್ಯಾರಂಟಿ ಸಮಿತಿ ಅಧ್ಯಕ್ಷರು ಹಾಗೂ ಅಖಿಲ ಭಾರತ ಲಿಂಗಾಯತ ಮಹಾಸಭಾ ಕಾರ್ಯನಿರ್ವಾಹಕ ಸಮಿತಿ ಸದಸ್ಯರೂ ಆಗಿರುವ ಸಂಗನಗೌಡ (ಮಿಥುನ್) ಜಿ.ಪಾಟೀಲರು ಈಗ ಕ್ಷೇತ್ರದಲ್ಲಿ ಬೆಳೆಯುತ್ತಿರುವ ಯುವ ರಾಜಕಾರಣಿ.

ಮಿಥುನ್ ಪಾಟೀಲರ ಜನ್ಮದಿನದ ಪ್ರಯುಕ್ತ ಎಂ.ಜಿ.ಪಿ ಯುವ ಬ್ರಿಗೇಡ್, ಗದಗ ಜಿಲ್ಲಾ ಕಬಡ್ಡಿ ಅಮೆಚೂರ್ ಅಸೋಸಿಯೇಷನ್ ಇವರ ಸಂಯುಕ್ತ ಆಶ್ರಯದಲ್ಲಿ ಕ್ರೀಡಾ ಪ್ರೇಮಿಗಳಿಗಾಗಿ ಪಟ್ಟಣದ ಸೇಲ್ಸ್ ಸೊಸೈಟಿಯಲ್ಲಿ ಪ್ರೋ ಕಬಡ್ಡಿ ವೈಭವ ಹಮ್ಮಿಕೊಳ್ಳಲಾಗಿದೆ. ನಾಲ್ಕು ಮಹಿಳಾ ತಂಡಗಳು ಸಹ ಪ್ರೋ ಕಬಡ್ಡಿಯಲ್ಲಿ ಪಾಲ್ಗೊಳ್ಳಲಿವೆ. ಪಟ್ಟಣದ ಸೋಮೇಶ್ವರ ದೇವಸ್ಥಾನದ ಆವರಣ ಸ್ವಚ್ಛತಾ ಕಾರ್ಯಕ್ರಮ, ವಾ.ಕ.ರ.ಸಾ ಸಂಸ್ಥೆಯಲ್ಲಿ ಚಿನ್ನದ ಪದಕ ಪಡೆದ ಚಾಲಕರಿಗೆ ಹಾಗೂ ಆಂಬುಲೆನ್ಸ್ ಚಾಲಕರಿಗೆ ಸನ್ಮಾನ ಹಮ್ಮಿಕೊಳ್ಳಲಾಗಿದೆ.

ರೋಣ ನಗರದ ರಾಜೀವ ಗಾಂಧಿ ಶಿಕ್ಷಣ ಸಂಸ್ಥೆಯ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ರಕ್ತದಾನ ಶಿಬಿರ ಜರುಗಲಿದೆ. ವಿದ್ಯಾರ್ಥಿಗಳಿಗೆ ನೋಟ್‌ಬುಕ್ ವಿತರಣೆ ಕಾರ್ಯಕ್ರಮವನ್ನು ಅವರ ಅಭಿಮಾನಿಗಳು ರೋಣ ಕ್ಷೇತ್ರಾದ್ಯಂತ ಹಮ್ಮಿಕೊಂಡಿದ್ದಾರೆ.

ಮುಂದೊಂದು ದಿನ ಕ್ಷೇತ್ರದ ಶಾಸಕರಾಗುವ ಛಲದಿಂದ ಕ್ಷೇತ್ರದ ಜನತೆಯ ನಾಡಿ ಮಿಡಿತ ಅರಿಯುವದರೊಂದಿಗೆ ಸ್ವತಃ ಮಿಥುನ್ ಪಾಟೀಲರು ರೋಣ ಕ್ಷೇತ್ರದಲ್ಲಿ ಸಾಮಾಜಿಕ ಅಭಿವೃದ್ಧಿ ಕಾರ್ಯದಲ್ಲಿ ತೊಡಗಿಸಿಕೊಂಡು ಸದಾ ಜನರ ನಾಡಿಮಿಡಿತ ಅರಿಯುವ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

ರೋಣ ಕ್ಷೇತ್ರದಾದ್ಯಂತ ಯುವಕರಲ್ಲಿ ಜಾಗೃತಿ ಮೂಡಿಸಲು, ಸಾಂಸ್ಕೃತಿಕ, ಕ್ರೀಡಾಕೂಟಗಳನ್ನು ಹಮ್ಮಿಕೊಂಡು ಕಬಡ್ಡಿ, ವಾಲಿಬಾಲ್, ಕ್ರಿಕೆಟ್ ಮತ್ತಿತರ ಕ್ರೀಡೆಗಳಿಗೆ ನೆರವು ನೀಡಿ ಪ್ರೋತ್ಸಾಹ ನೀಡುತ್ತ ಬಂದಿದ್ದಾರೆ. ಕ್ಷೇತ್ರದ ನಿರುದ್ಯೋಗಿ ಯುವಕರಿಗೆ ಉಚಿತ ಸಿಇಟಿ ತರಬೇತಿ ಹಮ್ಮಿಕೊಂಡು ಉದ್ಯೋಗ ತರಬೇತಿ ನೀಡಿ, ಕ್ಯಾಂಪಸ್ ಉದ್ಯೋಗ ಮೇಳ ಆಯೋಜಿಸುವ ಮೂಲಕ ಯುವಕರ ಕಣ್ಮಣಿಯಾಗಿದ್ದಾರೆ.

ತಂದೆಗೆ ತಕ್ಕ ಮಗನಾಗಿ ಜನಪರ ಸೇವೆಗೆ ಹೆಸರುವಾಸಿಯಾಗಿರುವ ಮಿಥುನ್ ಜಿ.ಪಾಟೀಲ ಬಡವರ, ಮಧ್ಯಮ ವರ್ಗದವರು, ಮಹಿಳೆಯರು, ರೈತರು, ಕಾರ್ಮಿಕರಿಗೆ ಸರಕಾರದ ಯೋಜನೆಗಳನ್ನು ತಲುಪಿಸುವ ಕಾರ್ಯದಲ್ಲಿ ನಿರಂತರವಾಗಿ ತೊಡಗಿಸಿಕೊಂಡಿದ್ದಾರೆ. ಸರಳ ಸಜ್ಜನಿಕೆ, ಮಾನವೀಯ ಮಮತೆಯನ್ನು ಮೈಗೂಡಿಸಿಕೊಂಡಿರುವ ಮಿಥುನ್ ಜಿ.ಪಾಟೀಲರು ಈ ಭಾಗದ ಯುವ ರಾಜಕಾರಣಿಗಳ ಜೊತೆ ಬೆರೆತು ಸಾಮಾಜಿಕ ಕಾರ್ಯದಲ್ಲಿ ನಿರಂತರವಾಗಿ ತೊಡಗಿಸಿಕೊಂಡಿದ್ದಾರೆ.

“ಕಡು ಬಡವರ, ಮಹಿಳೆಯರ, ಯುವಕರ, ರೈತರ, ಕಾರ್ಮಿಕರ ಹಿತಕ್ಕಾಗಿ, ಸರಕಾರದ ಪಂಚ ಗ್ಯಾರಂಟಿಗಳನ್ನು ಜನತೆಗೆ ನೇರವಾಗಿ ತಲುಪಿಸಲು ಮಿಥುನ್ ಪಾಟೀಲರು ಗುರುತರವಾದ ಸೇವೆ ಸಲ್ಲಿಸುತ್ತಿದ್ದಾರೆ. ಆರೋಗ್ಯ ಚಿಕಿತ್ಸೆ, ಯುವಕರಿಗೆ ಉದ್ಯೋಗ ಕಲ್ಪಿಸಬೇಕೆಂಬ ಸೇವಾ ಮನೋಭಾವನೆ ಹೊಂದಿರುವ, ಸರ್ವ ಧರ್ಮಗಳ ಭಾವೈಕ್ಯತೆಯ ನೇತಾರ ಮಿಥುನ್ ಜಿ.ಪಾಟೀಲ್ ಆಗಿದ್ದಾರೆ”
– ಅಸಲಮ ಕೊಪ್ಪಳ.
ಸರಕಾರಿ ಪ.ಪೂ ಕಾಲೇಜಿನ
ಅಭಿವೃದ್ಧಿ ಸಮಿತಿ ಸದಸ್ಯರು, ರೋಣ.

“ಸದಾ ಜನಮುಖಿ, ಜನಾನುರಾಗಿಯಾಗಿ ರೈತರ, ಕಾರ್ಮಿಕರ, ಯುವಕರ, ವೃದ್ಧರ ಕಣ್ಣಿನ ಚಿಕಿತ್ಸೆ ಅಲ್ಲದೇ ಗ್ರಾಮೀಣ ಜನರ ಹಿತ ಕಾಪಾಡುವುದರ ಮೂಲಕ ಜನಸೇವೆಯನ್ನು ಮಾಡುತ್ತಾ ಬಂದಿರುವ ಸಂಗನಗೌಡ (ಮಿಥುನ್) ಜಿ.ಪಾಟೀಲರ ಕಾರ್ಯಕ್ರಮಗಳು ಜನರ ಜನಮಾನಸದಲ್ಲಿ ನೆಲೆ ನಿಂತಿವೆ”

  • ಬಸವರಡ್ಡಿ ಬಂಡಿಹಾಳ.
    ಕಾಂಗ್ರೆಸ್ ಪಕ್ಷದ ಯುವ ಮುಖಂಡರು.

ಜಾತ್ರಾ ಮಹೋತ್ಸವದಲ್ಲಿ ತೊಡಕುಗಳಾಗದಂತೆ ಕ್ರಮ ವಹಿಸಿ

0

ವಿಜಯಸಾಕ್ಷಿ ಸುದ್ದಿ, ಗದಗ: ತಾಲೂಕಿನ ಬಳಗಾನೂರು ಗ್ರಾಮದ ಶ್ರೀ ಚನ್ನವೀರ ಶರಣರ 31ನೇ ಪುಣ್ಯಸ್ಮರಣೋತ್ಸವ ಹಾಗೂ ಜಾತ್ರಾ ಮಹೋತ್ಸವದ ಅಂಗವಾಗಿ ಪೂಜ್ಯಶ್ರೀ ಶಿವಶಾಂತವೀರ ಶರಣರ ಸಾನ್ನಿಧ್ಯದಲ್ಲಿ, ಮಾಜಿ ಸಚಿವರು ಹಾಗೂ ನರಗುಂದ ಶಾಸಕರಾದ ಸಿ.ಸಿ. ಪಾಟೀಲರ ನೇತೃತ್ವದಲ್ಲಿ ಅಧಿಕಾರಿಗಳ ಪೂರ್ವಭಾವಿ ಸಭೆ ಜರುಗಿತು.

ಸಭೆಯಲ್ಲಿ ಶಾಸಕ ಸಿ.ಸಿ. ಪಾಟೀಲ ಮಾತನಾಡಿ, ಹೆಸ್ಕಾಂನ ಗದಗ ವಲಯದ ಅಧಿಕಾರಿಗಳು ಇದೇ ಜನವರಿ 24, 25, 26ರಂದು ಮೂರು ದಿನಗಳವರೆಗೆ ನಿರಂತರ ಥ್ರಿ ಫೇಸ್ ವಿದ್ಯುತ್ ಸರಬರಾಜು ಮಾಡಬೇಕು. ವಿವಿಧ ಇಲಾಖೆಗಳ ವತಿಯಿಂದ ಶ್ರೀಮಠದ ಆವರಣದಲ್ಲಿ ವಿದ್ಯುತ್ ದೀಪದ ವ್ಯವಸ್ಥೆ ಮತ್ತು ಕುಡಿಯುವ ನೀರಿನ ವ್ಯವಸ್ಥೆ ಮಾಡಿಸಬೇಕು. ಲೋಕೋಪಯೋಗಿ ಇಲಾಖೆ ವತಿಯಿಂದ ಶ್ರೀಮಠದ ಮುಖ್ಯ ರಸ್ತೆಗೆ ಮತ್ತು ಆವರಣಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಕೆಂಪು ಮಣ್ಣು ಹಾಕಿ, ಹರಡಿಸುವ ವ್ಯವಸ್ಥೆ ಮಾಡಿಸಬೇಕು ಎಂದರು.

ಗದಗ-ಬಳಗಾನೂರ, ರೋಣ-ಬಳಗಾನೂರ (ಸಂದಿಗವಾಡ, ಹೊನ್ನಾಪುರ, ಕದಡಿ ಮಾರ್ಗ) ಮತ್ತು ಗದಗ-ಲಿಂಗದಾಳ (ಹೊಂಬಳ, ಲಿಂಗದಾಳ), ಬಳಗಾನೂರ-ನರಗುಂದ (ಬೆಳವಣಿಕಿ-ಯಾವಗಲ್) ಮಾರ್ಗವಾಗಿ ವಿಶೇಷ ಬಸ್ಸುಗಳನ್ನು ಓಡಿಸಬೇಕು. ಈ ಜಾತ್ರೆಯ ಅಂಗವಾಗಿ ಗದಗ-ಬಳಗಾನೂರ ಒಳಗಿನ ರಸ್ತೆಯನ್ನು, ಹುಯಿಳಗೋಳ-ಗಾವರವಾಡ ರಸ್ತೆಯನ್ನು ಮತ್ತು ಹೊಂಬಳ-ಬಳಗಾನೂರ ರಸ್ತೆಯನ್ನು ತಾತ್ಕಾಲಿಕವಾಗಿ ಮತ್ತು ತುರ್ತಾಗಿ ದುರಸ್ತಿ ಮಾಡಿಸಬೇಕೆಂದು ನಿರ್ದೇಶಿಸಿದ ಶಾಸಕ ಸಿ.ಸಿ. ಪಾಟೀಲ, ಜಾತ್ರೆಯಲ್ಲಿ ಭಕ್ತರು ಹಾಗೂ ಗ್ರಾಮಸ್ಥರು ಸ್ವಚ್ಛತೆ ಕಾಪಾಡಲು ಹೆಚ್ಚಿನ ಆದ್ಯತೆ ನೀಡುವ ಮೂಲಕ ಚನ್ನವೀರ ಶರಣರ ಕೃಪೆಗೆ ಎಲ್ಲರೂ ಪಾತ್ರರಾಗಬೇಕೆಂದು ಹೇಳಿದರು.

ವೇದಿಕೆ ಮೇಲೆ ಹುಲಕೋಟಿಯ ಗುರುನಾಥಗೌಡ ಓದುಗೌಡ್ರ, ಅರಹುಣಿಸಿಯ ಎಸ್.ಎಸ್. ಪಾಟೀಲ, ಗದುಗಿನ ವಸಂತಗೌಡ ಪೊಲೀಸ್‌ಪಾಟೀಲ, ಪ್ರದೀಪ್ ನರಗುಂದ, ಡಿ.ಸ. ಹಡಗಲಿಯ ವಸಂತ ಮೇಟಿ, ಹೊನ್ನಾಪುರದ ಶಂಕರಗೌಡ ಪಾಟೀಲ, ಲಿಂಗದಾಳದ ಪ್ರದೀಪಗೌಡ ನವಲಗುಂದ, ಹುಲ್ಲೂರಿನ ವೀರಯ್ಯಜ್ಜನವರು ಹಿರೇಮಠ ಉಪಸ್ಥಿತರಿದ್ದರು.

ಸಭೆಯಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಬಳಗನೂರು ಗ್ರಾಮದ ಗುರು-ಹಿರಿಯರು, ಶ್ರೀಮಠದ ಭಕ್ತರು ಮುಂತಾದವರು ಪಾಲ್ಗೊಂಡಿದ್ದರು.

ಈ ಮೂರು ದಿನಗಳಂದು ಸುಮಾರು 15 ಗಾಡಿ ನೀರಿನ ಟ್ಯಾಂಕರ್‌ಗಳನ್ನು ಪೂರೈಕೆ ಮಾಡಬೇಕು ಮತ್ತು ಶಾಂತಿ, ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸ್ ಸಿಬ್ಬಂದಿಗಳನ್ನು ನಿಯೋಜಿಸಬೇಕು. ವಾಹನ ನಿಲುಗಡೆ ವ್ಯವಸ್ಥೆಯನ್ನು ಅಚ್ಚುಕಟ್ಟತನದಿಂದ ನಿಭಾಯಿಸಲು ಟ್ರಾಫಿಕ್ ಪೊಲೀಸರನ್ನು ನಿಯೋಜಿಸಬೇಕು. ಜಾತ್ರಾ ಮಹೋತ್ಸವದಲ್ಲಿ ಮುಂಜಾಗ್ರತೆಯಾಗಿ ಜನರಿಗೆ ರೋಗ-ರುಜಿನುಗಳು ಬಾರದಂತೆ ವೈದ್ಯರ ತಂಡವನ್ನು ನಿಯೋಜಿಸುವುದು ಮತ್ತು ವಿಶೇಷವಾಗಿ ಎರಡು ಅಂಬುಲೆನ್ಸ್‌ಗಳನ್ನು ನಿಯೋಜನೆ ಮಾಡಬೇಕು ಎಂದು ಶಾಸಕ ಸಿ.ಸಿ. ಪಾಟೀಲ ಸೂಚಿಸಿದರು.

error: Content is protected !!