Home Blog Page 81

ರೇಣುಕಾಸ್ವಾಮಿ ಕೊಲೆ ಪ್ರಕರಣದ ಐವರು ಆರೋಪಿಗಳಿಗೆ ಬಿಗ್‌ ರಿಲೀಫ್: ಜಾಮೀನು ರದ್ದುಪಡಿಸಲು ನಿರಾಕರಣೆ

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಐವರು ಆರೋಪಿಗಳ ಜಾಮೀನು ರದ್ದುಪಡಿಸುವಂತೆ ಪ್ರಾಸಿಕ್ಯೂಷನ್ ಸಲ್ಲಿಸಿದ್ದ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ತಿರಸ್ಕರಿಸಿದೆ. ನ್ಯಾಯಮೂರ್ತಿ ಎಸ್. ರಾಚಯ್ಯ ಅವರ ಪೀಠ ಈ ಮಹತ್ವದ ಆದೇಶ ಪ್ರಕಟಿಸಿದೆ.

ನಟ ದರ್ಶನ್ ಸೇರಿದಂತೆ ಕೆಲ ಆರೋಪಿಗಳ ಜಾಮೀನು ಈ ಹಿಂದೆ ಸುಪ್ರೀಂಕೋರ್ಟ್‌ನಲ್ಲಿ ರದ್ದಾಗಿದ್ದ ಹಿನ್ನೆಲೆಯಲ್ಲಿ, ಆರೋಪಿಗಳಾದ ವಿನಯ್, ನಂದೀಶ್, ಧನರಾಜು, ಪವನ್ ಮತ್ತು ರಾಘವೇಂದ್ರ ಅವರ ಜಾಮೀನನ್ನೂ ರದ್ದುಪಡಿಸಬೇಕೆಂದು ಪ್ರಾಸಿಕ್ಯೂಷನ್ ಹೈಕೋರ್ಟ್ ಮೆಟ್ಟಿಲೇರಿತ್ತು.

ಪ್ರಕರಣಕ್ಕೆ ಸಂಬಂಧಿಸಿದಂತೆ ಸುದೀರ್ಘ ವಾದ-ಪ್ರತಿವಾದ ಆಲಿಸಿದ್ದ ಹೈಕೋರ್ಟ್, ಅಂತಿಮವಾಗಿ ಜಾಮೀನು ರದ್ದು ಅರ್ಜಿಯನ್ನು ವಜಾಗೊಳಿಸಿದೆ. ಇದರಿಂದ ಐವರು ಆರೋಪಿಗಳಿಗೆ ಸದ್ಯದ ಮಟ್ಟಿಗೆ ಜೈಲು ಭೀತಿ ತಪ್ಪಿದಂತಾಗಿದೆ.

ಆರೋಪಿ ನಂದೀಶ್ ಪರ ಹಿರಿಯ ವಕೀಲ ರಾಮ್ ಸಿಂಗ್ ವಾದ ಮಂಡಿಸಿದ್ದರು. ಹೈಕೋರ್ಟ್ ಆದೇಶದೊಂದಿಗೆ ಪ್ರಕರಣ ಮತ್ತೊಮ್ಮೆ ಚರ್ಚೆಗೆ ಗ್ರಾಸವಾಗಿದ್ದು, ಸದ್ಯ ಈ ಬಹುಚರ್ಚಿತ ಕೊಲೆ ಪ್ರಕರಣದ ಟ್ರಯಲ್ ಬೆಂಗಳೂರಿನ 59ನೇ ಸಿಸಿಎಚ್ ನ್ಯಾಯಾಲಯದಲ್ಲಿ ಮುಂದುವರಿಯುತ್ತಿದೆ.

ಜೂಮ್ ಆ್ಯಪ್ʼನಲ್ಲಿ ಕಾರು ಬುಕ್ ಮಾಡಿ ಕಳ್ಳತನ: ಅಂತಾರಾಜ್ಯ ಖದೀಮ ಎಲೆಕ್ಟ್ರಾನಿಕ್ ಸಿಟಿಯಲ್ಲಿ ಅರೆಸ್ಟ್.!

0

ಬೆಂಗಳೂರು: ಬಾಡಿಗೆ ಆಧಾರಿತ ವಾಹನ ಸೇವೆ ನೀಡುವ ಜೂಮ್ ಆ್ಯಪ್ ಮೂಲಕ ಕಾರು ಬುಕ್ ಮಾಡಿ ಕಳ್ಳತನ ಮಾಡಿದ್ದ ಆರೋಪದಡಿ ಮಲ್ಲೇಶ್ವರಂ ಪೊಲೀಸರು ಅಂತಾರಾಜ್ಯ ಖದೀಮನನ್ನು ಬಂಧಿಸಿದ್ದಾರೆ.

ಕೇರಳದ ಕಣ್ಣೂರು ಮೂಲದ ಮಿಶೆಲ್ ಶಫೀಕ್ ಬಂಧಿತ ಆರೋಪಿ. ಪಾದರಾಯನಪುರ ನಿವಾಸಿ ಸೈಯದ್ ಕದೀರ್ ಪಾಷಾ ಅವರಿಗೆ ಸೇರಿದ ಸ್ವಿಫ್ಟ್ ಕಾರನ್ನು ಬಾಡಿಗೆ ಹೆಸರಿನಲ್ಲಿ ಪಡೆದು ವಾಪಸ್ ನೀಡದೆ ಪರಾರಿಯಾಗಿದ್ದ ಆರೋಪ ಈತನ ಮೇಲಿದೆ.

ಸೈಯದ್ ಕದೀರ್ ಪಾಷಾ ಖಾಸಗಿ ಕಂಪನಿಯೊಂದರಲ್ಲಿ ಅಕೌಂಟ್ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸುತ್ತಿದ್ದು, 2023ರಲ್ಲಿ ಸ್ವಿಫ್ಟ್ ಕಾರು ಖರೀದಿಸಿದ್ದರು. ಮನೆ ಸಮೀಪ ಪಾರ್ಕಿಂಗ್ ವ್ಯವಸ್ಥೆ ಇಲ್ಲದ ಕಾರಣ ಮಲ್ಲೇಶ್ವರಂನ ಎಂಇಎಸ್ ಕಾಲೇಜು ಸಮೀಪದ ರಸ್ತೆಯಲ್ಲಿ ಕಾರು ನಿಲ್ಲಿಸುತ್ತಿದ್ದರು. ಈ ವಾಹನವನ್ನು ತಮ್ಮ ಸಹೋದರ ಫೈಸಲ್ ಖಾನ್ ಹೆಸರಿನಲ್ಲಿ ಜೂಮ್ ಕಾರ್ ಆ್ಯಪ್‌ನಲ್ಲಿ ನೋಂದಾಯಿಸಲಾಗಿತ್ತು.

ಏಪ್ರಿಲ್ 22ರಂದು ಆರೋಪಿ ಮಿಶೆಲ್ ಶಫೀಕ್ ಜೂಮ್ ಆ್ಯಪ್ ಮೂಲಕ ಕಾರು ಬುಕ್ ಮಾಡಿದ್ದ. ಅಗತ್ಯ ದಾಖಲೆಗಳಾದ ಚಾಲನಾ ಪರವಾನಗಿ ಹಾಗೂ ಆಧಾರ್ ಕಾರ್ಡ್ ಪರಿಶೀಲಿಸಿದ ಬಳಿಕ ಕಾರು ಹಸ್ತಾಂತರಿಸಲಾಗಿತ್ತು. ಆದರೆ ಒಂದು ದಿನಕ್ಕೆ ಬುಕ್ ಮಾಡಿದ್ದ ವಾಹನವನ್ನು ಆರೋಪಿ ನಿಗದಿತ ಅವಧಿಯಲ್ಲಿ ಹಿಂತಿರುಗಿಸದೇ ಪರಾರಿಯಾಗಿದ್ದಾನೆ ಎಂದು ದೂರುದಾರರು ಆರೋಪಿಸಿದ್ದಾರೆ.

ವಾಹನ ಪತ್ತೆಗಾಗಿ ಕಂಪನಿ ಅಧಿಕಾರಿಗಳು ಪರಿಶೀಲನೆ ನಡೆಸಿದಾಗ ಕಾರಿನಲ್ಲಿ ಅಳವಡಿಸಿದ್ದ ಜಿಪಿಎಸ್ ಸಾಧನವನ್ನು ಕತ್ತರಿಸಿರುವುದು ಬೆಳಕಿಗೆ ಬಂದಿದೆ. ಅಲ್ಲದೆ, ಆಧಾರ್ ಕಾರ್ಡ್‌ನಲ್ಲಿ ನೀಡಿದ್ದ ವಿಳಾಸವನ್ನು ಪರಿಶೀಲಿಸಿದಾಗ ಆರೋಪಿ ಹಲವು ವರ್ಷಗಳಿಂದ ಅಲ್ಲಿ ವಾಸಿಸುತ್ತಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ.

ಪ್ರಾಥಮಿಕ ತನಿಖೆಯ ಪ್ರಕಾರ, ಆರೋಪಿ ಕಾರನ್ನು ಕೇರಳಕ್ಕೆ ಕೊಂಡೊಯ್ದು, ಜಿಪಿಎಸ್ ಹಾಗೂ ಫಾಸ್ಟ್‌ಟ್ಯಾಗ್ ಸಾಧನಗಳನ್ನು ತೆಗೆದುಹಾಕಿದ್ದಾನೆ. ಕಂಪನಿ ಸಂಪರ್ಕಿಸಿದಾಗ ಶೀಘ್ರದಲ್ಲೇ ವಾಹನವನ್ನು ಹಿಂತಿರುಗಿಸುವುದಾಗಿ ಹೇಳಿ ತಪ್ಪಿಸಿಕೊಳ್ಳುತ್ತಿದ್ದ ಎನ್ನಲಾಗಿದೆ. ಬಳಿಕ ಕಾರನ್ನು ಮತ್ತೊಬ್ಬರಿಗೆ ನೀಡಿ ಮೊಬೈಲ್ ಫೋನ್ ಸ್ವಿಚ್ ಆಫ್ ಮಾಡಿಕೊಂಡು ತಲೆಮರೆಸಿಕೊಂಡಿದ್ದಾನೆ.

ತಾಂತ್ರಿಕ ಮಾಹಿತಿ ಆಧರಿಸಿ ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿಯನ್ನು ಎಲೆಕ್ಟ್ರಾನಿಕ್ ಸಿಟಿ ಪ್ರದೇಶದಲ್ಲಿ ಬಂಧಿಸಿದ್ದಾರೆ. ವಿಚಾರಣೆ ವೇಳೆ ಕಾರನ್ನು ಸ್ನೇಹಿತರಿಗೆ ನೀಡಿರುವುದಾಗಿ ಆರೋಪಿ ಬಾಯ್ಬಿಟ್ಟಿದ್ದಾನೆ ಎಂದು ಮೂಲಗಳು ತಿಳಿಸಿವೆ.

ಕೇರಳದ ಕಣ್ಣೂರು ಹಾಗೂ ತ್ರಿಶೂರ್ ಭಾಗಗಳಲ್ಲಿ ಹಲವು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿರುವ ಹಿನ್ನೆಲೆ ಆರೋಪಿಗೆ ಇರುವುದಾಗಿ ತಿಳಿದುಬಂದಿದೆ. ಸದ್ಯ ಪೊಲೀಸರು ಆರೋಪಿಯನ್ನು ಕಸ್ಟಡಿಗೆ ಪಡೆದು ವಿಚಾರಣೆ ಮುಂದುವರಿಸಿದ್ದು, ಕಳುವಾಗಿರುವ ಕಾರು ಪತ್ತೆಗಾಗಿ ವಿಶೇಷ ತಂಡವನ್ನು ಕೇರಳಕ್ಕೆ ಕಳುಹಿಸಿದ್ದಾರೆ.

ರಾಜ್ಯಸಭೆ ಟಿಕೆಟ್ ತಪ್ಪಿದರೂ ಮೋದಿ ಜೊತೆಗಿನ ಸಂಬಂಧಕ್ಕೆ ಧಕ್ಕೆಯಿಲ್ಲ: ದೇವೇಗೌಡ ಸ್ಪಷ್ಟನೆ

ಬೆಂಗಳೂರು: ರಾಜ್ಯಸಭಾ ಸದಸ್ಯತ್ವದ ಟಿಕೆಟ್ ಕೈತಪ್ಪಿದ ವಿಚಾರವನ್ನು ಮುಂದಿಟ್ಟು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ತಮ್ಮ ಸಂಬಂಧವನ್ನು ಪ್ರಶ್ನಿಸುವ ಅಗತ್ಯವಿಲ್ಲ ಎಂದು ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ಸ್ಪಷ್ಟಪಡಿಸಿದ್ದಾರೆ.

ನಗರದ ಜೆ.ಪಿ. ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಹಲವು ದಶಕಗಳಿಂದ ಉತ್ತಮ ಸಂಬಂಧ ಹೊಂದಿದ್ದೇನೆ. ರಾಜ್ಯಸಭಾ ಸ್ಥಾನ ಸಿಗಲಿಲ್ಲ ಎಂಬ ಕಾರಣಕ್ಕೆ ಆ ಸಂಬಂಧದಲ್ಲಿ ಯಾವುದೇ ಬಿರುಕು ಮೂಡುವುದಿಲ್ಲ ಎಂದು ಹೇಳಿದರು.

ಜೆಡಿಎಸ್ ಪಕ್ಷವು ಎನ್‌ಡಿಎ ಮೈತ್ರಿಕೂಟದ ಭಾಗವಾಗಿದ್ದು, ಮುಂದೆಯೂ ಅದೇ ಮೈತ್ರಿಯಲ್ಲಿ ಕಾರ್ಯನಿರ್ವಹಿಸಲಿದೆ. ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಕೇಂದ್ರ ಸಚಿವ ಸಂಪುಟದಲ್ಲಿ ಮುಂದುವರಿದು ದೇಶದ ಸೇವೆ ಸಲ್ಲಿಸಲಿದ್ದಾರೆ ಎಂದು ದೇವೇಗೌಡ ತಿಳಿಸಿದರು.

ರಾಜ್ಯಸಭಾ ಸ್ಥಾನ ಕುರಿತು ಮಾತನಾಡಿದ ಅವರು, ತಮಗೆ ನಿಜವಾಗಿಯೂ ರಾಜ್ಯಸಭಾ ಸದಸ್ಯತ್ವದ ಆಸಕ್ತಿ ಇದ್ದಿದ್ದರೆ ಪ್ರಧಾನಿ ನರೇಂದ್ರ ಮೋದಿ ಅಥವಾ ಕೇಂದ್ರ ಗೃಹ ಸಚಿವರೊಂದಿಗೆ ಈ ಬಗ್ಗೆ ಚರ್ಚಿಸಬಹುದಾಗಿತ್ತು. ಆದರೆ ತಾವು ಅಂತಹ ಯಾವುದೇ ಪ್ರಯತ್ನ ಮಾಡಿಲ್ಲ. ರಾಜ್ಯಸಭೆಗೆ ಹೋಗುವ ಆಸಕ್ತಿ ನನಗಿರಲಿಲ್ಲ. ಆದ್ದರಿಂದ ಈ ವಿಚಾರವಾಗಿ ಯಾರನ್ನೂ ಭೇಟಿ ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು.

41 ವರ್ಷದ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ: 10 ಮಂದಿ ಆರೋಪಿಗಳ ಬಂಧನ

0

ದಾವಣಗೆರೆ: ಪತಿಯೊಂದಿಗೆ ಉಂಟಾದ ಜಗಳದ ಬಳಿಕ ತವರಿಗೆ ತೆರಳುತ್ತಿದ್ದ 41 ವರ್ಷದ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿರುವ ಘಟನೆ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಬಸವಪಟ್ಟಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬೆಳಕಿಗೆ ಬಂದಿದೆ.

ಮಾಹಿತಿಯ ಪ್ರಕಾರ, ಜೂನ್ 3ರಂದು ಘಟನೆ ನಡೆದಿದ್ದು, ಮಹಿಳೆ ನಂತರ ತಡವಾಗಿ ಬಸವಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಮಹಿಳೆ ಪ್ರಯಾಣಿಸುತ್ತಿದ್ದ ವೇಳೆ ಹಂದಿ ಬೇಟೆಗೆ ತೆರಳಿದ್ದ ಆರೋಪಿಗಳ ಗುಂಪು ಆಕೆಯನ್ನು ಸಂಪರ್ಕಿಸಿ ಕುಡಿಯಲು ಕೂಲ್‌ಡ್ರಿಂಕ್ಸ್ ನೀಡಿದ ನಂತರ ತೋಟ ಪ್ರದೇಶಕ್ಕೆ ಕರೆದೊಯ್ದು ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ.

ಘಟನೆ ಬಳಿಕ ಆರೋಪಿಗಳು ಮಹಿಳೆಯ ಖಾಸಗಿ ದೃಶ್ಯಗಳನ್ನು ದಾಖಲಿಸಿದ್ದು, ನಂತರ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ ಎನ್ನಲಾಗಿದೆ. ನಂತರ ಪ್ರಕರಣ ಗಂಭೀರವಾಗುತ್ತಿದ್ದಂತೆ ಆ ವಿಡಿಯೋಗಳನ್ನು ಡಿಲೀಟ್ ಮಾಡಿದ್ದಾರೆ ಎಂದು ತಿಳಿದುಬಂದಿದೆ.

ದೂರು ದಾಖಲಾದ ಬೆನ್ನಲ್ಲೇ ಪೊಲೀಸರು 10 ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರು ಯಲೋದಹಳ್ಳಿ ಗ್ರಾಮದ ನಿವಾಸಿಗಳು ಎಂದು ತಿಳಿದುಬಂದಿದೆ.

ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸಂತ್ರಸ್ತೆಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದ್ದು, ಮುಂದಿನ ತನಿಖೆ ಮುಂದುವರಿದಿದೆ.

ಪಿಜಿಯಲ್ಲಿ ಇಂಜಿನಿಯರಿಂಗ್ ವಿದ್ಯಾರ್ಥಿ ಅನುಮಾನಾಸ್ಪದ ಸಾವು: ಕೊಲೆ ಶಂಕೆ

0

ಬಳ್ಳಾರಿ: ಬಳ್ಳಾರಿ ನಗರದ ಪಿಜಿ ಕೊಠಡಿಯಲ್ಲಿ ಇಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬ ನೇಣು ಬಿಗಿದ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ತೀವ್ರ ಅನುಮಾನಕ್ಕೆ ಕಾರಣವಾಗಿದೆ.

ಮೃತನನ್ನು ಸಿರಗುಪ್ಪ ತಾಲೂಕಿನ ಟಿ.ರಾಂಪುರ ಗ್ರಾಮದ ನಿವಾಸಿ ವಿಶ್ವನಾಥ್ (24) ಎಂದು ಗುರುತಿಸಲಾಗಿದೆ. ಆತ ಬಳ್ಳಾರಿಯ ಕಾಲೇಜಿನಲ್ಲಿ ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದು, ಅಶೋಕ್ ನಗರದ ಪಿಜಿಯಲ್ಲಿ ವಾಸಿಸುತ್ತಿದ್ದನು.

ಸ್ಥಳೀಯ ಮಾಹಿತಿಯ ಪ್ರಕಾರ, ಸೋಮವಾರ ವಿಶ್ವನಾಥ್ ಹಾಗೂ ಪಿಜಿಯ ಸಹಪಾಠಿಗಳ ನಡುವೆ ಜಗಳ ನಡೆದಿತ್ತು. ಅದರ ನಂತರ ಮಂಗಳವಾರ ಕೊಠಡಿಯಲ್ಲಿ ಶವ ಪತ್ತೆಯಾಗಿದೆ.

ಆದರೆ ಮೃತದೇಹದ ತಲೆ ಮತ್ತು ಎದೆ ಭಾಗದಲ್ಲಿ ಗಾಯಗಳಿರುವುದು ಕಂಡುಬಂದಿರುವುದರಿಂದ ಪ್ರಕರಣವನ್ನು ಸಾಮಾನ್ಯ ಆತ್ಮಹತ್ಯೆ ಎಂದು ಪರಿಗಣಿಸುವುದಕ್ಕೆ ಸಾಧ್ಯವಿಲ್ಲ ಎಂದು ಕುಟುಂಬಸ್ಥರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಘಟನೆಯ ನಂತರ ಕೌಲ್ ಬಜಾರ್ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಸಾವಿನ ನಿಖರ ಕಾರಣ ಪತ್ತೆಹಚ್ಚಲು ತನಿಖೆ ಮುಂದುವರಿಸಿದ್ದಾರೆ.

ರೇಣುಕಾಸ್ವಾಮಿ ಕೊಲೆ ಪ್ರಕರಣ; ಐವರು ಆರೋಪಿಗಳ ಜಾಮೀನು ಭವಿಷ್ಯ ಇಂದು ನಿರ್ಧಾರ

0

ಬೆಂಗಳೂರು: ಬಹುಚರ್ಚಿತ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜಾಮೀನಿನ ಮೇಲೆ ಬಿಡುಗಡೆಯಾಗಿರುವ ಐವರು ಆರೋಪಿಗಳ ಭವಿಷ್ಯ ಇಂದು ನಿರ್ಧಾರವಾಗಲಿದೆ. ಆರೋಪಿಗಳ ಜಾಮೀನು ರದ್ದುಪಡಿಸುವಂತೆ ಪ್ರಾಸಿಕ್ಯೂಷನ್ ಸಲ್ಲಿಸಿರುವ ಅರ್ಜಿಯ ಕುರಿತು ಕರ್ನಾಟಕ ಹೈಕೋರ್ಟ್ ಇಂದು ಮಧ್ಯಾಹ್ನ 2.30ಕ್ಕೆ ಆದೇಶ ಪ್ರಕಟಿಸಲಿದೆ.

ಈ ಪ್ರಕರಣದಲ್ಲಿ ಈಗಾಗಲೇ ನಟ ದರ್ಶನ್ ಸೇರಿದಂತೆ ಏಳು ಆರೋಪಿಗಳ ಜಾಮೀನು ರದ್ದುಪಡಿಸಿರುವ ಸುಪ್ರೀಂ ಕೋರ್ಟ್, ಅವರನ್ನು ಮತ್ತೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸುವಂತೆ ಆದೇಶ ನೀಡಿತ್ತು. ಇದರ ಬೆನ್ನಲ್ಲೇ ಉಳಿದ ಐವರು ಆರೋಪಿಗಳ ಜಾಮೀನನ್ನೂ ರದ್ದುಪಡಿಸಬೇಕು ಎಂದು ಪ್ರಾಸಿಕ್ಯೂಷನ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು.

ವಿನಯ್, ನಂದೀಶ್, ಧನರಾಜು, ಪವನ್ ಹಾಗೂ ರಾಘವೇಂದ್ರ ವಿರುದ್ಧ ಸಲ್ಲಿಕೆಯಾಗಿರುವ ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್ ನ್ಯಾಯಮೂರ್ತಿ ಎಸ್. ರಾಚಯ್ಯ ಅವರ ಪೀಠ ನಡೆಸಿದೆ. ಸುಪ್ರೀಂ ಕೋರ್ಟ್ ಆದೇಶದ ಅನ್ವಯ ಉಳಿದ ಆರೋಪಿಗಳಿಗೂ ಅದೇ ಮಾನದಂಡ ಅನ್ವಯಿಸಬೇಕು ಎಂದು ಪ್ರಾಸಿಕ್ಯೂಷನ್ ವಾದ ಮಂಡಿಸಿತ್ತು.

ದರ್ಶನ್ ಹಾಗೂ ಇತರ ಆರೋಪಿಗಳು ಜೈಲು ಸೇರಿದ ಬಳಿಕವೇ ಪ್ರಾಸಿಕ್ಯೂಷನ್ ಈ ಅರ್ಜಿಯನ್ನು ಸಲ್ಲಿಸಿತ್ತು. ಪ್ರಕರಣದ ಎಲ್ಲಾ ಅಂಶಗಳನ್ನು ಪರಿಶೀಲಿಸಿ, ಎರಡೂ ಕಡೆಯ ವಾದ-ಪ್ರತಿವಾದಗಳನ್ನು ಸುದೀರ್ಘವಾಗಿ ಆಲಿಸಿರುವ ಹೈಕೋರ್ಟ್ ಇಂದು ಮಧ್ಯಾಹ್ನ 2.30ಕ್ಕೆ ತನ್ನ ಆದೇಶ ಪ್ರಕಟಿಸಲಿದೆ.

ಸದ್ಯ ಪ್ರಕರಣದ ವಿಚಾರಣೆ 59ನೇ ಸಿಸಿಎಚ್ ನ್ಯಾಯಾಲಯದಲ್ಲಿ ನಡೆಯುತ್ತಿದ್ದು, ಹೈಕೋರ್ಟ್‌ನ ತೀರ್ಪು ಪ್ರಕರಣದ ಮುಂದಿನ ಹಂತದ ಮೇಲೆ ಮಹತ್ವದ ಪರಿಣಾಮ ಬೀರುವ ಸಾಧ್ಯತೆ ಇದೆ.

ಮುಖ್ಯ ಶಿಕ್ಷಕರ ಕಿರುಕುಳ ಆರೋಪ: 4ನೇ ಮಹಡಿಯಿಂದ ಹಾರಿ 10ನೇ ತರಗತಿ ವಿದ್ಯಾರ್ಥಿ ಆತ್ಮಹತ್ಯೆ!

0

ಬೀದರ್: ನಗರದ ಪ್ರತಾಪ್ ನಗರ ಪ್ರದೇಶದಲ್ಲಿ ಖಾಸಗಿ ಶಾಲೆಯ 10ನೇ ತರಗತಿ ವಿದ್ಯಾರ್ಥಿಯೊಬ್ಬ ಶಾಲಾ ಕಟ್ಟಡದ ನಾಲ್ಕನೇ ಮಹಡಿಯಿಂದ ಬಿದ್ದು ಮೃತಪಟ್ಟಿರುವ ಘಟನೆ ನಡೆದಿದೆ. ಘಟನೆ ಸಂಬಂಧ ವಿದ್ಯಾರ್ಥಿಯ ಪೋಷಕರು ಶಾಲೆಯ ಮುಖ್ಯ ಶಿಕ್ಷಕರ ವಿರುದ್ಧ ಕಿರುಕುಳದ ಆರೋಪ ಮಾಡಿದ್ದು,

ಮೃತ ವಿದ್ಯಾರ್ಥಿಯನ್ನು 16 ವರ್ಷದ ಸಮೀರ್ ಎಂದು ಗುರುತಿಸಲಾಗಿದೆ. ನಗರದ ಖಾಸಗಿ ಶಾಲೆಯೊಂದರಲ್ಲಿ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದನು ಎಂದು ತಿಳಿದುಬಂದಿದೆ.

ಮಾಹಿತಿಯ ಪ್ರಕಾರ, ಸಮೀರ್ ಇಂದು ಬೆಳಿಗ್ಗೆ ಎಂದಿನಂತೆ ಶಾಲೆಗೆ ತೆರಳಿದ್ದ. ಬಳಿಕ ಶಾಲಾ ಕಟ್ಟಡದ ನಾಲ್ಕನೇ ಮಹಡಿಯಿಂದ ಬಿದ್ದು ಸಾವನ್ನಪ್ಪಿದ್ದಾನೆ. ಘಟನೆಯ ನಿಖರ ಕಾರಣ ಇನ್ನೂ ಸ್ಪಷ್ಟವಾಗಿಲ್ಲ.

ಘಟನೆ ಬಳಿಕ ವಿದ್ಯಾರ್ಥಿಯ ಮೃತದೇಹವನ್ನು ಶಾಲಾ ಆಡಳಿತ ಮಂಡಳಿ ಬೀದರ್ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಬ್ರಿಮ್ಸ್) ಆಸ್ಪತ್ರೆಯ ಶವಗಾರಕ್ಕೆ ಸಾಗಿಸಿದೆ ಎನ್ನಲಾಗಿದೆ. ಈ ವಿಚಾರವನ್ನು ಕುಟುಂಬದವರಿಗೆ ತಕ್ಷಣ ಮಾಹಿತಿ ನೀಡದೇ ಆಸ್ಪತ್ರೆಗೆ ರವಾನಿಸಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ ಎಂದು ಪೋಷಕರು ಆರೋಪಿಸಿದ್ದಾರೆ.

ಶವಗಾರದ ಮುಂದೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ಮಗನ ಸಾವಿಗೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.

ಮೃತ ವಿದ್ಯಾರ್ಥಿಯ ಪೋಷಕರ ಆರೋಪದ ಪ್ರಕಾರ, ಸಮೀರ್ 1ನೇ ತರಗತಿಯಿಂದಲೂ ಇದೇ ಶಾಲೆಯಲ್ಲಿ ಓದುತ್ತಿದ್ದ. ಹೆಚ್ಚಿನ ಅಂಕಗಳನ್ನು ಪಡೆಯುವಂತೆ ನಿರಂತರ ಒತ್ತಡ ಹೇರುವುದು ಹಾಗೂ ಶಾಲೆಯಲ್ಲಿ ವಿವಿಧ ಕೆಲಸಗಳನ್ನು ಮಾಡಿಸುವ ಮೂಲಕ ಮುಖ್ಯ ಶಿಕ್ಷಕರು ಕಿರುಕುಳ ನೀಡುತ್ತಿದ್ದರು ಎಂದು ಆರೋಪಿಸಿದ್ದಾರೆ.

ಈ ಕಿರುಕುಳದಿಂದ ಮನನೊಂದ ವಿದ್ಯಾರ್ಥಿ ಆತ್ಮಹತ್ಯೆಯಂತಹ ನಿರ್ಧಾರಕ್ಕೆ ಮುಂದಾಗಿರಬಹುದು ಎಂದು ಪೋಷಕರು ಶಂಕೆ ವ್ಯಕ್ತಪಡಿಸಿದ್ದು,. ಆದರೆ ಈ ಆರೋಪಗಳ ಸತ್ಯಾಸತ್ಯತೆ ಪೊಲೀಸ್ ತನಿಖೆಯ ಬಳಿಕವೇ ಸ್ಪಷ್ಟವಾಗಬೇಕಿದೆ.

ಘಟನೆ ಸಂಬಂಧ ನ್ಯೂ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ವಿದ್ಯಾರ್ಥಿಯ ಸಾವಿನ ಕಾರಣ ಮತ್ತು ಪೋಷಕರು ಮಾಡಿರುವ ಆರೋಪಗಳ ಕುರಿತು ಪೊಲೀಸರು ತನಿಖೆ ಆರಂಭಿಸಿದ್ದಾರೆ.

18 ಕೋಟಿ ರೂ. ಮೌಲ್ಯದ ಅಕ್ರಮ ಆಸ್ತಿ ಪತ್ತೆ: ತೆಲಂಗಾಣದ ಉನ್ನತ ಅಧಿಕಾರಿ ಬಂಧನ

0

ಹೈದರಾಬಾದ್: ಆದಾಯಕ್ಕಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಅಕ್ರಮ ಆಸ್ತಿ ಸಂಪಾದನೆ ಮಾಡಿದ ಆರೋಪದಡಿ ತೆಲಂಗಾಣ ರಸ್ತೆ ಮತ್ತು ಕಟ್ಟಡಗಳ ಇಲಾಖೆಯ ಮುಖ್ಯ ಇಂಜಿನಿಯರ್ ಮೋಹನ್ ನಾಯ್ಕ್ ಜಾರುಪ್ಲ ಅವರನ್ನು ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಅಧಿಕಾರಿಗಳು ಬಂಧಿಸಿದ್ದಾರೆ.

ಸರ್ಕಾರಿ ಸೇವೆಯ ಅವಧಿಯಲ್ಲಿ ಕಾನೂನುಬಾಹಿರವಾಗಿ ಅಪಾರ ಪ್ರಮಾಣದ ಆಸ್ತಿ ಗಳಿಸಿರುವ ಕುರಿತು ಬಂದ ದೂರಿನ ಆಧಾರದ ಮೇಲೆ ಎಸಿಬಿ ಅಧಿಕಾರಿಗಳು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು. ಇದರ ಭಾಗವಾಗಿ ಮೋಹನ್ ನಾಯ್ಕ್ ಅವರ ಕಚೇರಿ, ನಿವಾಸ ಸೇರಿದಂತೆ ಸಂಬಂಧಿಕರು ಮತ್ತು ಆಪ್ತರಿಗೆ ಸೇರಿದ 15ಕ್ಕೂ ಹೆಚ್ಚು ಸ್ಥಳಗಳಲ್ಲಿ ಏಕಕಾಲದಲ್ಲಿ ದಾಳಿ ನಡೆಸಿ ಶೋಧ ಕಾರ್ಯ ಕೈಗೊಂಡಿದ್ದರು.

ದಾಳಿಯ ವೇಳೆ ಅಧಿಕಾರಿಗಳು ಭಾರೀ ಪ್ರಮಾಣದ ಚರ ಹಾಗೂ ಸ್ಥಿರ ಆಸ್ತಿಗಳನ್ನು ಪತ್ತೆಹಚ್ಚಿದ್ದಾರೆ. ನಿಜಾಮಾಬಾದ್ ಜಿಲ್ಲೆಯ ದಿಚ್ಪಲ್ಲಿ ಮಂಡಲದ ಮುಲ್ಲಂಗಿ ಗ್ರಾಮದಲ್ಲಿ 19.38 ಎಕರೆ ವ್ಯಾಪ್ತಿಯ ಐದು ಕೃಷಿ ಭೂಮಿಗಳ ದಾಖಲೆಗಳು ಪತ್ತೆಯಾಗಿದ್ದು, ಅವುಗಳ ಸರ್ಕಾರಿ ಮೌಲ್ಯ ಸುಮಾರು ₹82.9 ಲಕ್ಷ ಎಂದು ಅಂದಾಜಿಸಲಾಗಿದೆ.

ಇದರ ಜೊತೆಗೆ ಕೊಂಪಲ್ಲಿಯಲ್ಲಿ ಮೂರು ಹಾಗೂ ಗಚಿಬೌಲಿಯಲ್ಲಿ ನಾಲ್ಕು ಫ್ಲ್ಯಾಟ್‌ಗಳು ಸೇರಿದಂತೆ ಒಟ್ಟು ಏಳು ಫ್ಲ್ಯಾಟ್‌ಗಳು ಪತ್ತೆಯಾಗಿದ್ದು, ಅವುಗಳ ಸರ್ಕಾರಿ ಮೌಲ್ಯ ಸುಮಾರು ₹7.35 ಕೋಟಿ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಲ್ಲದೆ, ಮಿಯಾಪುರದಲ್ಲಿ ₹2.5 ಕೋಟಿ ಮೌಲ್ಯದ ಟ್ರಿಪ್ಲೆಕ್ಸ್ ವಿಲ್ಲಾ, ಕೂಕಟ್ಪಲ್ಲಿಯಲ್ಲಿ ಹೊಸದಾಗಿ ನಿರ್ಮಿಸಲಾದ ಮನೆ ಹಾಗೂ ನಿಜಾಂಪೇಟೆಯಲ್ಲಿ ಮತ್ತೊಂದು ವಿಲ್ಲಾ ಖರೀದಿಗೆ ₹1 ಕೋಟಿ ಮುಂಗಡ ಪಾವತಿ ಮಾಡಿರುವ ದಾಖಲೆಗಳೂ ಲಭ್ಯವಾಗಿವೆ.

ಶೋಧ ಕಾರ್ಯದ ವೇಳೆ ₹55 ಲಕ್ಷ ನಗದು, ವಿವಿಧ ಬ್ಯಾಂಕ್‌ಗಳಲ್ಲಿ ಇರಿಸಲಾಗಿದ್ದ ₹1.44 ಕೋಟಿ ಠೇವಣಿ ದಾಖಲೆಗಳು, ಸುಮಾರು 2.5 ಕೆಜಿ ಚಿನ್ನಾಭರಣ, 6 ಕೆಜಿ ಬೆಳ್ಳಿ ಆಭರಣಗಳು, ಐಷಾರಾಮಿ ವಾಹನಗಳು ಹಾಗೂ ಎಲೆಕ್ಟ್ರಾನಿಕ್ ಸಾಧನಗಳನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

ಪ್ರಾಥಮಿಕ ತನಿಖೆಯ ಪ್ರಕಾರ ಪತ್ತೆಯಾಗಿರುವ ಆಸ್ತಿಗಳ ಅಧಿಕೃತ ಮೌಲ್ಯ ಸುಮಾರು ₹17.95 ಕೋಟಿ ಎಂದು ಅಂದಾಜಿಸಲಾಗಿದೆ. ಆದರೆ ಹೈದರಾಬಾದ್ ಮತ್ತು ಸುತ್ತಮುತ್ತಲಿನ ಪ್ರದೇಶಗಳ ಮಾರುಕಟ್ಟೆ ದರಗಳನ್ನು ಪರಿಗಣಿಸಿದರೆ ಈ ಆಸ್ತಿಗಳ ನೈಜ ಮೌಲ್ಯ ₹100 ಕೋಟಿಗೂ ಅಧಿಕ ಇರಬಹುದೆಂದು ಎಸಿಬಿ ಅಧಿಕಾರಿಗಳು ಶಂಕಿಸಿದ್ದಾರೆ.

ಉದ್ಯಮಿ ಮನೆಯಲ್ಲಿ ₹25 ಲಕ್ಷ ಕಳವು; ನೇಪಾಳ ಮೂಲದ ದಂಪತಿ ಬಂಧನ

0

ಬೆಂಗಳೂರು: ಮನೆ ಕೆಲಸದ ನೆಪದಲ್ಲಿ ಉದ್ಯಮಿಯ ನಿವಾಸಕ್ಕೆ ಸೇರಿದ್ದ ದಂಪತಿ, ₹25 ಲಕ್ಷ ನಗದು ಕಳವು ಮಾಡಿ ಪರಾರಿಯಾಗಿದ್ದ ಪ್ರಕರಣವನ್ನು ಅಮೃತಹಳ್ಳಿ ಪೊಲೀಸರು ಭೇದಿಸಿದ್ದಾರೆ. ಪ್ರಕರಣ ಸಂಬಂಧ ನೇಪಾಳ ಮೂಲದ ದಂಪತಿಯನ್ನು ಬಂಧಿಸಿ, ಕಳವು ಮಾಡಿದ್ದ ಸಂಪೂರ್ಣ ಹಣವನ್ನು ವಶಪಡಿಸಿಕೊಳ್ಳಲಾಗಿದೆ.

ಬಂಧಿತ ಆರೋಪಿಗಳನ್ನು ಪವನ್ ಬಿಸ್ತಾ ಮತ್ತು ಸೀತಾ ಬಿಸ್ತಾ ಎಂದು ಗುರುತಿಸಲಾಗಿದೆ. ಆರೋಪಿಗಳು ಸುಮಾರು ಒಂದು ತಿಂಗಳ ಹಿಂದೆ ಅಮೃತಹಳ್ಳಿ ವ್ಯಾಪ್ತಿಯ ಉದ್ಯಮಿಯೊಬ್ಬರ ಮನೆಯಲ್ಲಿ ಕೆಲಸಕ್ಕೆ ಸೇರಿದ್ದರು.

ತನಿಖೆ ವೇಳೆ ಬೆಳಕಿಗೆ ಬಂದ ಮಾಹಿತಿಯ ಪ್ರಕಾರ, ಮನೆಯ ಮಾಲೀಕರು ಸಿಬ್ಬಂದಿಗೆ ಸಂಬಳ ನೀಡುವ ಉದ್ದೇಶದಿಂದ ಬ್ಯಾಂಕ್‌ನಿಂದ ₹25 ಲಕ್ಷ ಹಣವನ್ನು ಡ್ರಾ ಮಾಡಿ ಮನೆಯ ಕಬೋರ್ಡ್‌ನಲ್ಲಿ ಇಟ್ಟು ಲಾಕ್ ಮಾಡಿದ್ದರು. ಕಬೋರ್ಡ್‌ನ ಕೀಲಿಯನ್ನು ಮತ್ತೊಂದು ಕಬೋರ್ಡ್‌ನಲ್ಲಿ ಇರಿಸಲಾಗಿತ್ತು.

ಈ ಮಾಹಿತಿ ಆರೋಪಿಗಳಿಗೆ ತಿಳಿದಿದ್ದು, ಮನೆಯ ಮಾಲೀಕರು ಇಲ್ಲದ ಸಮಯವನ್ನು ಬಳಸಿಕೊಂಡು ಕಬೋರ್ಡ್‌ನಲ್ಲಿದ್ದ ₹25 ಲಕ್ಷ ನಗದು ಹಣವನ್ನು ಕಳವು ಮಾಡಿ ಪರಾರಿಯಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಾಥಮಿಕ ತನಿಖೆಯಲ್ಲಿ ಆರೋಪಿಗಳು ಕಳವು ಮಾಡುವ ಉದ್ದೇಶದಿಂದಲೇ ಕಡಿಮೆ ಸಂಬಳಕ್ಕೆ ಮನೆ ಕೆಲಸಕ್ಕೆ ಸೇರಿದ್ದರು ಎಂಬ ಅನುಮಾನ ವ್ಯಕ್ತವಾಗಿದೆ. ಕಳವು ನಡೆದ ತಕ್ಷಣ ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚಿಸಲಾಗಿತ್ತು.

ತಾಂತ್ರಿಕ ಮಾಹಿತಿ ಮತ್ತು ತನಿಖೆಯ ಆಧಾರದ ಮೇಲೆ ಕಾರ್ಯಾಚರಣೆ ನಡೆಸಿದ ಪೊಲೀಸರು, ಆರೋಪಿಗಳು ಬೆಂಗಳೂರು ತೊರೆಯುವ ಮುನ್ನವೇ ಅವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತರಿಂದ ಕಳವು ಮಾಡಿದ್ದ ₹25 ಲಕ್ಷ ನಗದು ಹಣವನ್ನು ವಶಪಡಿಸಿಕೊಳ್ಳಲಾಗಿದೆ. ಪ್ರಕರಣ ಸಂಬಂಧ ಅಮೃತಹಳ್ಳಿ ಪೊಲೀಸರು ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.

ಬೆಂಗಳೂರು–ಬೀದರ್ ವಿಮಾನ ವೇಳಾಪಟ್ಟಿ ಬದಲಾವಣೆಗೆ ಈಶ್ವರ ಖಂಡ್ರೆ ಆಕ್ಷೇಪ

ಬೆಂಗಳೂರು: ಸ್ಟಾರ್ ಏರ್ ಸಂಸ್ಥೆ ಬೆಂಗಳೂರು–ಬೀದರ್–ಬೆಂಗಳೂರು ನಡುವಿನ ವಿಮಾನ ವೇಳಾಪಟ್ಟಿಯನ್ನು ನಾಳೆಯಿಂದ ಅನ್ವಯವಾಗುವಂತೆ ಬದಲಾಯಿಸಿರುವುದಕ್ಕೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಬಿ ಖಂಡ್ರೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ಸಂಬಂಧ ಅವರು ಮುಖ್ಯಮಂತ್ರಿ ಹಾಗೂ ಮೂಲಸೌಕರ್ಯ ಅಭಿವೃದ್ಧಿ ಸಚಿವರಿಗೆ ಪತ್ರ ಬರೆದು, ಈ ಹಿಂದೆ ಇದ್ದ ಬೆಳಗಿನ ವೇಳಾಪಟ್ಟಿ ಪ್ರಯಾಣಿಕರಿಗೆ ಅತ್ಯಂತ ಅನುಕೂಲಕರವಾಗಿತ್ತು ಎಂದು ತಿಳಿಸಿದ್ದಾರೆ. ಬೆಳಗ್ಗೆ 6:30ಕ್ಕೆ ಬೆಂಗಳೂರಿನಿಂದ ಹೊರಟ ವಿಮಾನ 7:45ಕ್ಕೆ ಬೀದರ್ ತಲುಪಿ, 8:15ಕ್ಕೆ ಬೀದರ್‌ನಿಂದ ಹೊರಟು 9:30ಕ್ಕೆ ಮತ್ತೆ ಬೆಂಗಳೂರಿಗೆ ಆಗಮಿಸುತ್ತಿತ್ತು ಎಂದು ವಿವರಿಸಿದ್ದಾರೆ.

ಈ ಬೆಳಗಿನ ವೇಳಾಪಟ್ಟಿ ಬೀದರ್ ಹಾಗೂ ಸುತ್ತಮುತ್ತಲ ಜಿಲ್ಲೆಗಳ ಪ್ರಯಾಣಿಕರು, ವ್ಯಾಪಾರಿಗಳು ಮತ್ತು ತೆಲಂಗಾಣ ಭಾಗದ ಪ್ರಯಾಣಿಕರಿಗೆ ಸಹಾಯಕವಾಗಿತ್ತು ಎಂದು ಅವರು ಹೇಳಿದ್ದಾರೆ.

ಆದರೆ ಹೊಸ ವೇಳಾಪಟ್ಟಿಯಂತೆ ಜೂನ್ 10ರಿಂದ ವಿಮಾನ ಮಧ್ಯಾಹ್ನ 12:30ಕ್ಕೆ ಬೆಂಗಳೂರಿನಿಂದ ಹೊರಟು 1:45ಕ್ಕೆ ಬೀದರ್ ತಲುಪಲಿದೆ. ಬಳಿಕ 2:30ಕ್ಕೆ ಬೀದರ್‌ನಿಂದ ಹೊರಟು 3:30ಕ್ಕೆ ಬೆಂಗಳೂರಿಗೆ ಮರಳಲಿದೆ.

ಈ ಬದಲಾವಣೆಯಿಂದ ಪ್ರಯಾಣಿಕರ ಅನುಕೂಲತೆ ಕಡಿಮೆಯಾಗುವ ಸಾಧ್ಯತೆ ಇದ್ದು, ಪ್ರಯಾಣಿಕರ ಸಂಖ್ಯೆಯಲ್ಲಿಯೂ ಇಳಿಕೆ ಉಂಟಾಗಬಹುದು ಎಂದು ಸಚಿವರು ಎಚ್ಚರಿಸಿದ್ದಾರೆ. ಜೊತೆಗೆ ರಾಜ್ಯ ಸರ್ಕಾರ ಮತ್ತು ಕೆಕೆಆರ್‌ಡಿಬಿಯಿಂದ ನೀಡಲಾಗುತ್ತಿರುವ ವಿಜಯಬಿಲಿಟಿ ಗ್ಯಾಪ್ ಫಂಡ್ (ವಿಜಿಎಫ್) ಬಳಕೆ ಸಹ ಪರಿಣಾಮಕಾರಿಯಾಗುವುದಿಲ್ಲ ಎಂದು ತಿಳಿಸಿದ್ದಾರೆ.

ಉಡಾನ್ ಯೋಜನೆಯಡಿ ಕೇಂದ್ರ ಸಬ್ಸಿಡಿ ಸ್ಥಗಿತಗೊಂಡ ನಂತರ ಸೇವೆ ಹಲವು ಬಾರಿ ನಿಲ್ಲಿಸಿ ಮತ್ತೆ ಆರಂಭಿಸಲಾಗಿದ್ದು, ರಾಜ್ಯ ಸರ್ಕಾರದ ಸಹಾಯಧನದಿಂದ ಮಾತ್ರ ಈ ಮಾರ್ಗ ನಿರ್ವಹಣೆಯಾಗುತ್ತಿದೆ ಎಂದು ಅವರು ಪತ್ರದಲ್ಲಿ ಸ್ಮರಿಸಿದ್ದಾರೆ.