Home Blog Page 199

MI vs RCB: RCB–ಮುಂಬೈ ಮುಖಾಮುಖಿ: ಮೊದಲ ಪಂದ್ಯ ಯಾವಾಗ, ಎಷ್ಟು ಗಂಟೆಗೆ?

0

ಮಹಿಳಾ ಪ್ರೀಮಿಯರ್ ಲೀಗ್ (WPL) ನಾಲ್ಕನೇ ಆವೃತ್ತಿಗೆ ಭರ್ಜರಿ ಆರಂಭವಾಗಲಿದ್ದು, ಮೊದಲ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ (MI) ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡಗಳು ಮುಖಾಮುಖಿಯಾಗಲಿವೆ. ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಎರಡು ಬಾರಿ ಟ್ರೋಫಿ ಗೆದ್ದಿದ್ದರೆ, ಆರ್‌ಸಿಬಿ ಒಂದು ಬಾರಿ ಪ್ರಶಸ್ತಿ ತನ್ನದಾಗಿಸಿಕೊಂಡಿದೆ.

ಹೀಗಾಗಿ, ಆರಂಭಿಕ ಪಂದ್ಯದಲ್ಲೇ ಕಠಿಣ ಪೈಪೋಟಿ ನಿರೀಕ್ಷಿಸಲಾಗಿದೆ. ಈ ಪಂದ್ಯ ನವಿ ಮುಂಬೈನ ಡಾ. ಡಿ.ವೈ. ಪಾಟೀಲ್ ಕ್ರೀಡಾಂಗಣದಲ್ಲಿ ನಡೆಯಲಿದ್ದು, ರಾತ್ರಿ 7:30ಕ್ಕೆ ಆರಂಭವಾಗಲಿದೆ. ಮುಂಬೈ ತಂಡವನ್ನು ಹರ್ಮನ್‌ಪ್ರೀತ್ ಕೌರ್ ಮುನ್ನಡೆಸುತ್ತಿದ್ದರೆ, ಆರ್‌ಸಿಬಿಗೆ ಸ್ಮೃತಿ ಮಂಧಾನ ನಾಯಕತ್ವ ವಹಿಸಿದ್ದಾರೆ.

ಉಭಯ ತಂಡಗಳ ಬಲಾಬಲ

ಕಾಗದದ ಮೇಲೆ ಮುಂಬೈ ಇಂಡಿಯನ್ಸ್ ತಂಡ ಹೆಚ್ಚು ಬಲಿಷ್ಠವಾಗಿ ಕಾಣಿಸುತ್ತದೆ. ಹರ್ಮನ್‌ಪ್ರೀತ್ ಕೌರ್ ಜೊತೆ ಇಂಗ್ಲೆಂಡ್ ನಾಯಕಿ ನ್ಯಾಟ್ ಸಿವರ್-ಬ್ರಂಟ್, ವೆಸ್ಟ್ ಇಂಡೀಸ್ ನಾಯಕಿ ಹೀಲಿ ಮ್ಯಾಥ್ಯೂಸ್ ಪ್ರಮುಖ ಶಕ್ತಿ. ನ್ಯೂಜಿಲೆಂಡ್‌ನ ಅಮೆಲಿಯಾ ಕೆರ್, ಆಸ್ಟ್ರೇಲಿಯಾದ ಮಿಲ್ಲಿ ಇಲಿಂಗ್‌ವರ್ತ್ ಹಾಗೂ ಭಾರತದ ಅಮನ್‌ಜೋತ್ ಕೌರ್ ತಂಡದ ಆಳವನ್ನು ಹೆಚ್ಚಿಸಿದ್ದಾರೆ.

ಆರ್‌ಸಿಬಿ ಪಾಳಯದಲ್ಲಿ ನಾಯಕಿ ಸ್ಮೃತಿ ಮಂಧಾನ ಜೊತೆಗೆ ಆಸ್ಟ್ರೇಲಿಯಾದ ಜಾರ್ಜಿಯಾ ವೋಲ್, ಆಲ್‌ರೌಂಡರ್ ಗ್ರೇಸ್ ಹ್ಯಾರಿಸ್, ದಕ್ಷಿಣ ಆಫ್ರಿಕಾದ ನಾಡಿನ್ ಡಿ ಕ್ಲಾರ್ಕ್ ಪ್ರಮುಖ ಪಾತ್ರವಹಿಸಲಿದ್ದಾರೆ. ಆಕ್ರಮಣಕಾರಿ ಬ್ಯಾಟಿಂಗ್‌ಗೆ ಪ್ರಸಿದ್ಧಳಾದ ವಿಕೆಟ್‌ಕೀಪರ್ ರಿಚಾ ಘೋಷ್ ಕೂಡ ತಂಡದ ದೊಡ್ಡ ಶಕ್ತಿ.

ಸಂಭಾವ್ಯ ಪ್ಲೇಯಿಂಗ್ 11

ಮುಂಬೈ ಇಂಡಿಯನ್ಸ್: ಹಿಲ್ಲಿ ಮ್ಯಾಥ್ಯೂಸ್, ನ್ಯಾಟ್ ಸೈವರ್-ಬ್ರಂಟ್, ಹರ್ಮನ್‌ಪ್ರೀತ್ ಕೌರ್ (ನಾಯಕಿ), ಅಮೆಲಿಯಾ ಕೆರ್, ಸಜೀವನ್ ಸಜ್ನಾ, ಅಮನ್ಜೋತ್ ಕೌರ್, ಜಿ ಕಮಲಿನಿ, ಶಬ್ನೀಮ್ ಇಸ್ಮಾಯಿಲ್, ಸೈಕಾ ಇಶಾಕ್, ನಿಕೋಲಾ ಕ್ಯಾರಿ, ಪೂನಮ್ ಖೇಮ್ನಾರ್

ರಾಯಲ್ ಚಾಲೆಂಜರ್ಸ್ ಬೆಂಗಳೂರು: ಸ್ಮೃತಿ ಮಂಧಾನ (ನಾಯಕಿ), ರಿಚಾ ಘೋಷ್, ಶ್ರೇಯಾಂಕ ಪಾಟೀಲ್, ನಡಿನ್ ಡಿ ಕ್ಲಾರ್ಕ್, ಗ್ರೇಸ್ ಹ್ಯಾರಿಸ್, ಜಾರ್ಜಿಯಾ ವಾಲ್, ರಾಧಾ ಯಾದವ್, ಲಾರೆನ್ ಬೆಲ್, ಅರುಂಧತಿ ರೆಡ್ಡಿ, ಪೂಜಾ ವಸ್ತ್ರಾಕರ್, ದಯಾಲನ್ ಹೇಮಲತಾ.

ಕಾಂಗ್ರೆಸ್ʼನವರ ಕಳ್ಳತನ ನಿಂತು ಹೋಗುವ ಭಯದಿಂದ ಜಿ ರಾಮ್ ಜಿ ಯೋಜನೆಗೆ ವಿರೋಧ: ಬೊಮ್ಮಾಯಿ

0

ಬೆಂಗಳೂರು: ವಿಬಿ ಜಿ ರಾಮ್ ಜಿ ಯೋಜನೆಯಲ್ಲಿ 100 ರಿಂದ 125 ದಿನಕ್ಕೆ ಕೂಲಿ ದಿನ ಹೆಚ್ಚಳ ಮಾಡಿದ್ದಾರೆ. ಇದರಿಂದ ಕೂಲಿಕಾರಿಗೆ ಅನುಕೂಲ ಆಗಲಿದೆ. ಈ ಯೋಜನೆಯಲ್ಲಿ ಪ್ರತಿ ಮನೆಯಲ್ಲಿ ಕೆಲಸ ಇರುವವರು, ಇಲ್ಲದವರ ಪಟ್ಟಿ ಮಾಡುವುದು, ಅಭಿವೃದ್ಧಿ ಯೋಜನೆ ರೂಪಿಸುವುದು,

ಅನುಷ್ಠಾನಗೊಳಿಸುವುದು, ಕಾರ್ಮಿಕರಿಗೆ ಕೂಲಿ ಕೊಡುವ ಅಧಿಕಾರ ಗ್ರಾಮ ಪಂಚಾಯತಿಗಳಿಗೆ ಇದೆ. ತಮ್ಮ ಕಳ್ಳತನ ನಿಂತು ಹೊಗುವ ಭಯದಿಂದ ಕಾಂಗ್ರೆಸ್ ವಿರೋಧ ಮಾಡುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಆರೋಪಿಸಿದರು.

ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ನವರು ಜಿ ರಾಮ್ ಜಿ ಯೋಜನೆಯಲ್ಲಿ ಗ್ರಾಮ ಪಂಚಾಯತಿಗಳ ಅಧಿಕಾರ ಮೊಟಕುಗೊಳಿಸಲಾಗಿದೆ ಅಂತ ಹೇಳುತ್ತಾರೆ. ವಿಬಿ ಜಿ ರಾಮ್ ಜಿ ವಿಧೆಯಕದ ಕ್ಲಾಸ್ 16 ರಲ್ಲಿ ಗ್ರಾಮ ಪಂಚಾಯತಿಗೆ ಎಲ್ಲಾ ಮನೆಯಲ್ಲಿ ಕೆಲಸ ಇದೆಯಾ ಇಲ್ವಾ ಅಂತ ನೋಡುವ ಹಕ್ಕಿದೆ‌. ಗ್ರಾಮದ ಅಭಿವೃದ್ದಿ ಯೋಜನೆ ರೂಪಿಸುವ ಹಕ್ಕು, ಯೋಜನೆ ಅನುಷ್ಠಾನ ಮಾಡುವ ಅಧಿಕಾರ, ಎಲ್ಲಾ ದಾಖಲೆ ಮಾಡುವ ಅಧಿಕಾರ, ಕೂಲಿ ಕೊಡುವ ಅಧಿಕಾರ ಅವರಿಗೆ ಇದೆ. ಯಾಕೆ ಕಾಂಗ್ರೆಸ್ ನವರು ವಿರೋಧ ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದರು.

ವಿಕಸಿತ ಭಾರತ ಎಂದರೆ ಗ್ರಾಮ ರಾಜ್ಯ ರಾಮರಾಜ್ಯ ಆಗಲಿ ಅಂತ ಯೋಜನೆ ಮಾಡಿದ್ದಾರೆ‌. ಈ ಯೋಜನೆಯಲ್ಲಿ ಸ್ಕೂಲ್ ರೂಮ್ ಕಟ್ಟಲು ಅವಕಾಶ ಇದೆ. ಕರ್ನಾಟಕದಲ್ಲಿ ಸುಮಾರು 30 ಸಾವಿರ ಸ್ಕೂಲ್ ರೂಮ್ ಕಟ್ಟಲು ಅವಕಾಶ ಇದೆ. ನಮ್ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಕೇಂದ್ರ ಸಚಿವ ಶಿವರಾಜ್ ಸಿಂಗ್ ಚೌಹ್ವಾನ್ ಅವರು, ಇವತ್ತಿನ ಅಗತ್ಯಕ್ಕೆ ತಕ್ಕಂತೆ ಯೋಜನೆ ಮಾಡಿದ್ದಾರೆ. ಮಧ್ಯವರ್ತಿಗಳ ಹಾವಳಿ ತಪ್ಪಿಸಲು ಆಧಾರ ಸೀಡಿಂಗ್,

ಡಿಜಿಟಲೈಜೇಷನ್ ಮಾಡಿದ್ದಾರೆ. ಹಿಂದೆ ಕೂಲಿಗಾಗಿ ಕಾಳು ಯೋಜನೆಯಲ್ಲಿ ಹಿಂದಿನ ಸಿಎಂ ವೀರೇಂದ್ರ ಪಾಟೀಲ್ ಅವರ ಹೆಸರಿನಲ್ಲಿ ಕೂಲಿ ಪಡೆದಿದ್ದರು. ಕಾಲಿನ ಹೆಬ್ಬಟ್ಟಿನಿಂದ ಸಹಿ ಮಾಡಿದ್ದರು. ಈ ಯೋಜನೆ ಅನಿಷ್ಠಾನದಲ್ಲಿ ಗುಲಬರ್ಗಾ ಮೊದಲ ಸ್ಥಾನದಲ್ಲಿತ್ತು ಅದನ್ನು ತನಿಖೆ ಮಾಡಿದಾಗ ಅವ್ಯವಹಾರ ಪತ್ತೆಯಾಗಿ ಸಿಬಿಐ ತನಿಖೆ ನಡೆಸಲಾಗಿತ್ತು. ಬೆಳಗಾವಿಯಲ್ಲಿಯೂ ಸಿಬಿಐ ತನಿಖೆ ನಡೆದಿತ್ತು ಎಂದು ಹೇಳಿದರು.

ವಿಬಿ ಜಿ ರಾಮ್ ಜಿ ಯೋಜನೆಯ ಅಡಿಯಲ್ಲಿ ಗ್ರಾಮ ಪಂಚಾಯತಿಗೆ ಹೆಚ್ಚಿನ ಅಧಿಕಾರ ಇದೆ. ಸಂವಿಧಾನದ 73 ನೇ ತಿದ್ದುಪಡಿಯನ್ನು ಸಂಪೂರ್ಣ ಬಳಕೆ ಮಾಡಿಕೊಳ್ಳಗಿದೆ. ತಮ್ಮ ಕಳ್ಳತನ ನಿಂತು ಹೊಗುವ ಭಯದಿಂದ ಕಾಂಗ್ರೆಸ್ ವಿರೋಧ ಮಾಡುತ್ತಿದೆ. ಗ್ರಾಮ ಪಂಚಾಯತಿ ಸದಸ್ಯರಿಗೆ ಹೆಚ್ಚಿನ ಅಧಿಕಾರ ಕೊಟ್ಟಿದ್ದಾರೆ.

ಸದಸ್ಯರು ಇದನ್ನು ಸರಿಯಾಗಿ ಓದಬೇಕು. ಗ್ರಾಮಿಣ ಜನರಿಗೆ ಹೆಚ್ಚಿನ ಸದಪಯೋಗ ನೀಡಲು ಸಕಾರಾತ್ಮವಾಗಿ ಈ ಯೋಜನೆ ಇದೆ. ಇದನ್ನು ಕಾಂಗ್ರೆಸ್ ಕೊರ್ಟ್ ನಲ್ಲಿ ಚಾಲೆಂಜ್ ಮಾಡಲಿ, ಅವರ ನಿಜ ಬಣ್ಣ ಬಯಲಾಗುತ್ತದೆ. ಅಧಿವೇಶನದಲ್ಲಿ ಯೋಜನೆಯ ಬಗ್ಗೆ ಚರ್ಚೆ ಮಾಡುತ್ತೇವೆ ಎಂದು ಹೇಳಿದರು.

ಈ ಯೋಜ‌ನೆಯಲ್ಲಿ ಗಾಂಧಿಜಿ ಹೆಸರು ಕೈ ಬಿಟ್ಟಿರುವುದಕ್ಕೆ ಕಾಂಗ್ರೆಸ್ ಆಕ್ಷೇಪಿಸುತ್ತಿರುವ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಶೇ 80 ರಷ್ಟು ಯೋಜನೆಗಳು ಜವಾಹರಲಾಲ್ ನೆಹರು, ಇಂದಿರಾ, ರಾಜೀವ್ ಗಾಂಧಿ ಹೆಸರಿನಲ್ಲಿವೆ. ಇದು ಮೊದಲು ಜವಾಹರ ರೋಜಗಾರ ಯೋಜನೆ ಅಂತ ಇತ್ತು.

ಚುನಾವಣೆ ಬಂದಾಗ ಗಾಂಧಿ ಹೆಸರನ್ನು ದುರುಪಯೊಗ ಪಡೆಸಿಕೊಂಡಿದ್ದಾರೆ. ಗಾಂಧಿಯನ್ನು ರಾಮನಿಂದ ಬೇರ್ಪಡಿಸಲು ಸಾಧ್ಯವಿಲ್ಲ. ಗಾಂಧಿಯಾವಾಗಲು ರಾಮನ ಹೆಸರು ಹೇಳುತ್ತಿದ್ದರು. ಈಗ ಈ ಯೋಜನೆಗೆ ರಾಮನ ಹೆಸರಿಟ್ಟಿರುವುದಕ್ಕೆ ಗಾಂಧಿ ಆತ್ಮ ಖುಷಿಯಾಗಿರುತ್ತದೆ ಎಂದು ಹೇಳಿದರು.

ಮನರೇಗಾ ಕುರಿತು ಪ್ರಹ್ಲಾದ್ ಜೋಶಿ ಸಾರ್ವಜನಿಕ ಚರ್ಚೆಗೆ ಬನ್ನಿ: ಡಿ.ಕೆ. ಶಿವಕುಮಾರ್ ಆಹ್ವಾನ

0

ಬೆಂಗಳೂರು, :“ಮನರೇಗಾ ಯೋಜನೆ ಹಾಗೂ ವಿಬಿ ಜಿ ರಾಮ್ ಜಿ ಯೋಜನೆ ಬಗ್ಗೆ ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಷಿ ಅವರು ಬಹಿರಂಗ ಚರ್ಚೆಗೆ ಬರಲಿ. ಆ ಮೂಲಕ ಜನರಿಗೆ ಈ ವಿಚಾರವಾಗಿ ಜಾಗೃತಿ ಮೂಡಿಸಬಹುದು” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಸವಾಲೆಸೆದರು. ಸದಾಶಿವನಗರ ನಿವಾಸದ ಬಳಿ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್ ಅವರು ಶುಕ್ರವಾರ ಪ್ರತಿಕ್ರಿಯೆ ನೀಡಿದರು.

ಯುಪಿಎ ಸರ್ಕಾರದ ಅವಧಿಯ ಮನರೇಗಾ ಯೋಜನೆಯಲ್ಲಿ 11 ಲಕ್ಷ ಕೋಟಿ ಅವ್ಯವಹಾರ ನಡೆದಿದೆ ಎಂಬ ಪ್ರಹ್ಲಾದ್ ಜೋಷಿ ಅವರ ಹೇಳಿಕೆ ಬಗ್ಗೆ ಕೇಳಿದಾಗ, “ಬಿಜೆಪಿ ರಾಜ್ಯಾಧ್ಯಕ್ಷರು, ವಿರೋಧ ಪಕ್ಷದ ನಾಯಕರು ಅಥವಾ ಕೇಂದ್ರ ಸಚಿವರು, ಈ ಮೂವರಲ್ಲಿ ಯಾರಾದರೂ ಒಬ್ಬರು ಮಾಧ್ಯಮ ವೇದಿಕೆ ಮೇಲೆ ಚರ್ಚೆಗೆ ಬರಲಿ. ನಾನು ಈ ವಿಚಾರವಾಗಿ ಚರ್ಚೆ ಮಾಡಲು ಸಿದ್ಧನಿದ್ದೇನೆ.

ಈ ಯೋಜನೆಯಲ್ಲಿ ಅವ್ಯವಹಾರವಾಗಿದ್ದರೆ ಸಿಬಿಐ ತನಿಖೆಗೆ ನೀಡಲಿ. ಅದು ಎಷ್ಟೇ ಕೋಟಿ ಅವ್ಯವಹಾರವಾದರೂ ತಾಕತ್ತಿದ್ದರೆ ತನಿಖೆ ಮಾಡಿಸಲಿ. ಜವಾಬ್ದಾರಿಯುತ ಸ್ಥಾನದಲ್ಲಿರುವ ಯಾವುದೇ ನಾಯಕರು ಇಂತಹ ಆರೋಪ ಮಾಡಲು ಸಾಧ್ಯವಿಲ್ಲ, ಅವರು ನಿಜವಾಗಿಯೂ ಈ ರೀತಿ ಹೇಳಿದ್ದಾರಾ?” ಎಂದು ತಿಳಿಸಿದರು.

ಮನರೇಗಾ ಉಳಿಸಲು 2 ದಿನಗಳ ವಿಶೇಷ ಅಧಿವೇಶನ ಕರೆಯುವ ಬಗ್ಗೆ ಕೇಳಿದಾಗ, “2 ದಿನ ವಿಶೇಷ ಅಧಿವೇಶನ ಕರೆದು ಈ ವಿಚಾರವಾಗಿ ಸಂಪೂರ್ಣ ಚರ್ಚೆ ಮಾಡಲಾಗುವುದು. ಬಿಜೆಪಿಯವರು ವಿಬಿ ಜಿ ರಾಮ್ ಜಿ ಯೋಜನೆ ಬಗ್ಗೆ ಅಭಿಯಾನ ಮಾಡಲು ಪ್ರಯತ್ನಿಸುತ್ತಿದ್ದಾರೆ. ಅವರ ಕಾರ್ಯಕ್ರಮದ ಬಗ್ಗೆ ಅವರು ಸಮರ್ಥನೆ ಮಾಡಿಕೊಳ್ಳಲಿ, ಈ ಕಾರ್ಯಕ್ರಮದಿಂದ ಏನೆಲ್ಲಾ ಕೆಟ್ಟ ಪರಿಣಾಮ ಬೀರಲಿದೆ ಎಂದು ನಾವು ಹೇಳುತ್ತೇವೆ” ಎಂದು ತಿಳಿಸಿದರು.

ಕೇರಳದ ಮಲೆಯಾಳಂ ಭಾಷೆ ಬಿಲ್ ವಿಚಾರವಾಗಿ ಕೇಳಿದಾಗ, “ಈ ವಿಚಾರವಾಗಿ ನನಗೆ ಇನ್ನು ಸಂಪೂರ್ಣ ಮಾಹಿತಿ ಇಲ್ಲ” ಎಂದು ತಿಳಿಸಿದರು. ನಿಮಗೆ ಸಿಕ್ಕಿರುವ ಅಧಿಕಾರ ನಮಗೆ ಸಿಕ್ಕಿಲ್ಲ ಎಂಬ ಕುಮಾರಸ್ವಾಮಿ ಅವರ ಟ್ವೀಟ್ ಬಗ್ಗೆ ಕೇಳಿದಾಗ, “ಬಹಳ  ಸಂತೋಷ, ಅವರು ಖುಷಿಯಾಗಿ ಸಂತೋಷವಾಗಿರಲಿ” ಎಂದರು.ಡಿಸಿಎಂ ಆದ ತಕ್ಷಣ ವಿಶೇಷ ಕೊಂಬು ಇರುವುದಿಲ್ಲ ಎಂಬ ಕುಮಾರಸ್ವಾಮಿ ಅವರ ಟೀಕೆ ಬಗ್ಗೆ ಕೇಳಿದಾಗ, “ಅವರ ಶಾಸಕರುಗಳು ಇದ್ದಾರಲ್ಲಾ ಅವರ ಮೂಲಕ ಈ ವಿಚಾರವನ್ನು ಚರ್ಚೆ ಮಾಡಲು ಹೇಳಲಿ” ಎಂದು ಹೇಳಿದರು.

ಸಿಂಧನೂರಿನಲ್ಲಿ ಶಾರ್ಟ್ ಸರ್ಕ್ಯೂಟ್‌ʼನಿಂದ ಬೆಂಕಿ: ಏಳು ಅಂಗಡಿಗಳು ಸಂಪೂರ್ಣ ಭಸ್ಮ

0

ರಾಯಚೂರು: ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಬೆಂಕಿ ಹೊತ್ತಿಕೊಂಡು ಏಳು ಅಂಗಡಿಗಳು ಹೊತ್ತಿ ಉರಿದಿರುವ ಘಟನೆ ರಾಯಚೂರು ಜಿಲ್ಲೆಯ ಸಿಂಧನೂರಿನಲ್ಲಿ ಗುರುವಾರ ತಡರಾತ್ರಿ ನಡೆದಿದೆ. ಸಿಂಧನೂರು ಪಟ್ಟಣದ ಕನಕದಾಸ ವೃತ್ತದ ಬಳಿ, ಆರನೇ ವಾರ್ಡ್ ವ್ಯಾಪ್ತಿಯಲ್ಲಿ ಇರುವ ದೆಹಲಿ ಬಜಾರ್,

ಮೊಬೈಲ್ ಅಂಗಡಿ, ಬಟ್ಟೆ ಅಂಗಡಿ, ಚಿಕ್ಕನ್ ಶಾಪ್, ಜನರಲ್ ಸ್ಟೋರ್, ಹಗ್ಗ ಮಾರಾಟ ಕೇಂದ್ರ ಸೇರಿದಂತೆ ಒಟ್ಟು ಏಳು ಅಂಗಡಿಗಳಿಗೆ ಬೆಂಕಿ ಹತ್ತಿಕೊಂಡು ಅವು ಸಂಪೂರ್ಣವಾಗಿ ಭಸ್ಮವಾಗಿವೆ. ಪ್ರಾಥಮಿಕ ಮಾಹಿತಿಯ ಪ್ರಕಾರ ಶಾರ್ಟ್ ಸರ್ಕ್ಯೂಟ್‌ನಿಂದಲೇ ಈ ಅಗ್ನಿ ಅವಘಡ ಸಂಭವಿಸಿದೆ ಎಂದು ತಿಳಿದುಬಂದಿದೆ.

ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಲು ಹರಸಾಹಸ ಪಟ್ಟಿದ್ದು, ನಸುಕಿನ ಜಾವದವರೆಗೆ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ಸಂಪೂರ್ಣವಾಗಿ ನಿಯಂತ್ರಿಸಿದ್ದಾರೆ. ರಾಜ್ಯ ಹೆದ್ದಾರಿಗೆ ಹೊಂದಿಕೊಂಡಿದ್ದ ಈ ಅಂಗಡಿಗಳಲ್ಲಿದ್ದ ವಸ್ತುಗಳೆಲ್ಲ ಸುಟ್ಟು ಭಸ್ಮವಾಗಿವೆ.

ಒಂದರ ಪಕ್ಕ ಒಂದರಂತೆ ನಿರ್ಮಿಸಲಾದ ಅಂಗಡಿಗಳಿದ್ದ ಕಾರಣ, ಒಂದು ಅಂಗಡಿಯಿಂದ ಮತ್ತೊಂದಕ್ಕೆ ಬೆಂಕಿ ವೇಗವಾಗಿ ಹರಡಿದೆ. ಆದರೂ ಹೆಚ್ಚಿನ ಅನಾಹುತ ಸಂಭವಿಸದಂತೆ ಎಚ್ಚರಿಕೆಯಿಂದ ಬೆಂಕಿ ನಂದಿಸಲಾಗಿದ್ದು, ಭಾರೀ ದುರಂತ ತಪ್ಪಿದೆ.

ಸದ್ಯ ಅಗ್ನಿ ಅವಘಡದಿಂದ ಉಂಟಾದ ನಷ್ಟದ ನಿಖರ ಪ್ರಮಾಣ ತಿಳಿದುಬಂದಿಲ್ಲ. ಎಲ್ಲ ಅಂಗಡಿಗಳೂ ಟಿನ್ ಶೆಡ್‌ಗಳಿಂದ ನಿರ್ಮಿಸಲ್ಪಟ್ಟಿದ್ದವು. ಅದೃಷ್ಟವಶಾತ್ ಯಾವುದೇ ಜೀವಹಾನಿ ಸಂಭವಿಸಿಲ್ಲ. ಆದರೆ ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳಿಗೆ ಹಾನಿಯಾಗಿದೆ ಎಂದು ಅಂದಾಜಿಸಲಾಗಿದೆ. ನಷ್ಟ ಪರಿಹಾರ ನೀಡುವಂತೆ ಅಂಗಡಿ ಮಾಲೀಕರು ಮನವಿ ಮಾಡಿಕೊಂಡಿದ್ದಾರೆ.

ಸಿಂಧನೂರು ನಗರ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಅಂಗಡಿ ಮಾಲೀಕರು ನೀಡಿದ ದೂರಿನ ಆಧಾರದಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಪೊಲೀಸ್ ತನಿಖೆಯಿಂದ ಘಟನೆಗೆ ನಿಖರ ಕಾರಣ ತಿಳಿದು ಬರಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನರೇಗಾ ಸೋಷಿಯಲ್ ಆಡಿಟ್‌ʼನಲ್ಲಿ 10.51 ಲಕ್ಷ ದೂರುಗಳು: ಕಾಂಗ್ರೆಸ್ ವಿರುದ್ಧ ಪ್ರಹ್ಲಾದ್ ಜೋಶಿ ವಾಗ್ದಾಳಿ

0

ಬೆಂಗಳೂರು: ನರೇಗಾ ಯೋಜನೆಗೆ ಸಂಬಂಧಿಸಿದ ಗ್ರಾಮಸಭೆಗಳ ಸೋಷಿಯಲ್ ಆಡಿಟ್‌ನಲ್ಲಿ 10 ಲಕ್ಷ 51 ಸಾವಿರ ದೂರುಗಳು ದಾಖಲಾಗಿವೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ತಿಳಿಸಿದ್ದಾರೆ. ಮನಬಂದಂತೆ ಕೆಲಸ ಮಾಡಿ ಕೇಂದ್ರ ಸರ್ಕಾರದ ಹಣ ದುರುಪಯೋಗಪಡಿಸಿಕೊಳ್ಳುವ ವ್ಯವಸ್ಥೆ ಈ ಯೋಜನೆಯಲ್ಲಿ ಇತ್ತು ಎಂದು ಆರೋಪಿಸಿದರು.

ಬೆಂಗಳೂರು ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಪ್ರಹ್ಲಾದ್ ಜೋಶಿ, ವಿಕಸಿತ ಭಾರತ ಉದ್ಯೋಗ ಖಾತ್ರಿ ಮತ್ತು ಜೀವನೋಪಾಯ ಮಿಷನ್ (ವಿಬಿ–ಜಿ ರಾಮ್ ಜಿ) ವಿರುದ್ಧ ಕಾಂಗ್ರೆಸ್ ಪಕ್ಷ ಹೋರಾಟಕ್ಕೆ ಕರೆ ನೀಡಿರುವುದನ್ನು ಪ್ರಶ್ನಿಸಿದರು. “ಕಾಂಗ್ರೆಸ್ ಯಾವ ಪುರುಷಾರ್ಥಕ್ಕಾಗಿ ಮತ್ತು ಯಾವ ನೈತಿಕತೆ ಆಧಾರದ ಮೇಲೆ ವಿಬಿ–ಜಿ ರಾಮ್ ಜಿ ವಿರುದ್ಧ ಹೋರಾಟಕ್ಕೆ ಕರೆ ನೀಡುತ್ತಿದೆ ಎಂಬುದನ್ನು ಸ್ಪಷ್ಟಪಡಿಸಬೇಕು” ಎಂದು ಆಗ್ರಹಿಸಿದರು.

ಗ್ರಾಮಸಭೆಗಳ ಸೋಷಿಯಲ್ ಆಡಿಟ್‌ನಲ್ಲಿ ಕಳೆದ ಮೂರು ವರ್ಷಗಳ ಅವಧಿಯಲ್ಲಿ 10.51 ಲಕ್ಷ ದೂರುಗಳು ಬಂದಿವೆ. “ನಮಗೆ ಕೂಲಿ ಸಿಕ್ಕಿಲ್ಲ, ನಮ್ಮಲ್ಲಿ ಕೆಲಸ ಆಗಿಲ್ಲ, ಹಣ ದೋಚಲಾಗಿದೆ” ಎಂಬ ಆರೋಪಗಳು ದೂರುಗಳಲ್ಲಿ ದಾಖಲಾಗಿವೆ. ಮೊಬೈಲ್ ಟ್ರ್ಯಾಕಿಂಗ್ ಮತ್ತು ಜಿಪಿಎಸ್ ವ್ಯವಸ್ಥೆ ಅಳವಡಿಸಿದರೆ ಸಮಸ್ಯೆ ಏನು ಎಂದು ಅವರು ಪ್ರಶ್ನಿಸಿದರು.

ವಿಕಸಿತ ಭಾರತ ಉದ್ಯೋಗ ಖಾತ್ರಿ ಮತ್ತು ಜೀವನೋಪಾಯ ಮಿಷನ್ ಕುರಿತು ಕಾಂಗ್ರೆಸ್ ಪಕ್ಷ 10ರಿಂದ ಹೋರಾಟ ನಡೆಸುವುದಾಗಿ ಹೇಳಿದೆ. ಈ ಕುರಿತು ಪ್ರತಿಕ್ರಿಯಿಸಿದ ಜೋಶಿ, 20 ವರ್ಷಗಳ ಹಿಂದೆ ಈ ಯೋಜನೆ ರೂಪಿಸಿದಾಗ ವಿಕಸಿತ ಭಾರತ ಅಥವಾ ಆಸ್ತಿ ನಿರ್ಮಾಣದ ಪರಿಕಲ್ಪನೆ ಇರಲಿಲ್ಲ ಎಂದು ಹೇಳಿದರು.

ಆ ಸಮಯದಲ್ಲಿ ದೇಶದ ಮತ್ತು ಜನರ ಆರ್ಥಿಕ ಸ್ಥಿತಿ ಅತ್ಯಂತ ಕಠಿಣವಾಗಿತ್ತು. ವಿಕಸಿತ ಭಾರತವಾಗುವ ಸಂದರ್ಭದಲ್ಲಿ ಮೂಲಭೂತ ಸೌಕರ್ಯಗಳು ಹಾಗೂ ದೀರ್ಘಾವಧಿಯ ಆಸ್ತಿಗಳು ಇರುವ ವಿಕಸಿತ ಗ್ರಾಮಗಳ ನಿರ್ಮಾಣ ಅಗತ್ಯವಿದೆ. ಇಲ್ಲವಾದರೆ ದೊಡ್ಡ ಪ್ರಮಾಣದಲ್ಲಿ ಹಳ್ಳಿಗಳು ಖಾಲಿಯಾಗುವ ಅಪಾಯವಿದೆ ಎಂದು ಹೇಳಿದರು.

ಬಳ್ಳಾರಿ ಬ್ಯಾನರ್ ಗಲಭೆ ಪ್ರಕರಣದಲ್ಲಿ ಪೊಲೀಸರ ನಡೆಗೆ ಗಾಲಿ ಜನಾರ್ದನ ರೆಡ್ಡಿ ಆಕ್ಷೇಪ

ಬಳ್ಳಾರಿ: ಜಿಲ್ಲೆಯ ಬ್ಯಾನರ್ ಗಲಭೆ ಪ್ರಕರಣ ರಾಜಕೀಯ ಹಾಗೂ ಆಡಳಿತಾತ್ಮಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಗಂಗಾವತಿ ಶಾಸಕ ಗಾಲಿ ಜನಾರ್ದನ ರೆಡ್ಡಿ, ಈ ಗಲಭೆಗೆ ಪೊಲೀಸ್ ಅಧಿಕಾರಿಗಳೇ ಕಾರಣ ಎಂದು ಆರೋಪಿಸಿ ಬಳ್ಳಾರಿ ಎಎಸ್‌ಪಿ ರವಿಕುಮಾರ್, ಡಿಎಸ್ಪಿ ಚಂದ್ರಕಾಂತ ನಂದರೆಡ್ಡಿ ಹಾಗೂ ಕಾಂಗ್ರೆಸ್ ಶಾಸಕ ನಾರಾ ಭರತ್ ರೆಡ್ಡಿ ವಿರುದ್ಧ ಬ್ರೂಸ್‌ಪೇಟೆ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ.

ಜನವರಿ 1ರಂದು ತಮ್ಮ ನಿವಾಸದ ಬಳಿ ಬ್ಯಾನರ್ ಹಾಕುವ ವಿಚಾರವಾಗಿ ಗಲಾಟೆ ನಡೆದಿದ್ದು, ಈ ವೇಳೆ ಕಲ್ಲು ತೂರಾಟ, ಪೆಟ್ರೋಲ್ ಬಾಂಬ್ ಎಸೆತ ಮತ್ತು ಗುಂಡಿನ ದಾಳಿ ನಡೆದಿದೆ ಎಂದು ರೆಡ್ಡಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಈ ಘಟನೆಯ ಮೂಲಕ ತಮ್ಮನ್ನು ಹತ್ಯೆ ಮಾಡುವ ಸಂಚು ರೂಪಿಸಲಾಗಿದೆ ಎಂಬುದು ಅವರ ಗಂಭೀರ ಆರೋಪವಾಗಿದೆ.

ಜನವರಿ 6ರಂದು ಈ ಸಂಬಂಧ ಮೂವರ ವಿರುದ್ಧ ದೂರು ನೀಡಿದ್ದರೂ, ಪೊಲೀಸರು ಎಫ್‌ಐಆರ್ ದಾಖಲಿಸದೇ ಹಿಂಬರಹ ನೀಡಿರುವುದನ್ನು ರೆಡ್ಡಿ ತೀವ್ರವಾಗಿ ಪ್ರಶ್ನಿಸಿದ್ದಾರೆ. “ನಾನು ಕೊಟ್ಟ ದೂರು ಒಂದು ರೀತಿಯದು, ಪೊಲೀಸರು ಕೊಟ್ಟ ಹಿಂಬರಹ ಮತ್ತೊಂದು ರೀತಿಯದು. ಆರೋಪಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಅಧಿಕಾರಿಗಳು ಹಿಂದೇಟು ಹಾಕುತ್ತಿದ್ದಾರೆ” ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇತ್ತ ಪೊಲೀಸ್ ಇಲಾಖೆ ನೀಡಿರುವ ಸ್ಪಷ್ಟನೆಯ ಪ್ರಕಾರ, ಇದೇ ಘಟನೆಗೆ ಸಂಬಂಧಿಸಿದಂತೆ ಈಗಾಗಲೇ ಪ್ರಕರಣ ದಾಖಲಾಗಿದ್ದು, ಹೊಸ ದೂರನ್ನು ಮುಂದುವರೆದ ಮಾಹಿತಿ ಎಂದು ಪರಿಗಣಿಸಿ ತನಿಖೆಗೆ ಸೇರಿಸಲಾಗುತ್ತದೆ. ಆದರೆ ಈ ನಡೆ ಹಿಂದೆ ರಾಜಕೀಯ ಒತ್ತಡವಿದೆ ಎಂದು ರೆಡ್ಡಿ ಆರೋಪಿಸಿದ್ದು, ಪ್ರಕರಣ ಬಳ್ಳಾರಿ ರಾಜಕೀಯ ವಲಯದಲ್ಲಿ ದೊಡ್ಡ ಚರ್ಚೆಯ ವಿಷಯವಾಗುತ್ತಿದೆ.

‘ದಿ ರಾಜಾ ಸಾಬ್’ ಪ್ರೀಮಿಯರ್ ಶೋನಲ್ಲಿ ಭುಗಿಲೆದ್ದ ಪ್ರಭಾಸ್‌ ಅಭಿಮಾನಿಗಳ ಆಕ್ರೋಶ

ಪ್ರಭಾಸ್ ಅಭಿನಯದ ‘ದಿ ರಾಜಾ ಸಾಬ್’ ಸಿನಿಮಾ ಇಂದು (ಜನವರಿ 09) ಅಧಿಕೃತವಾಗಿ ತೆರೆಕಂಡಿದೆ. ನಿನ್ನೆ ರಾತ್ರಿ ಆಂಧ್ರ ಮತ್ತು ತೆಲಂಗಾಣಗಳಲ್ಲಿ ಪ್ರೀಮಿಯರ್ ಶೋಗಳು ಪ್ರದರ್ಶನಗೊಂಡಿದ್ದು, ಅಭಿಮಾನಿಗಳ ನಿರೀಕ್ಷೆ ಉತ್ತುಂಗಕ್ಕೇರಿತ್ತು. ಆದರೆ ತೆಲಂಗಾಣದಲ್ಲಿ ವಿಶೇಷ ಶೋ ಹಾಗೂ ಟಿಕೆಟ್ ದರ ಹೆಚ್ಚಳಕ್ಕೆ ನ್ಯಾಯಾಲಯದ ಅನುಮತಿ ಪಡೆಯಬೇಕಿದ್ದ ಕಾರಣ, ಪ್ರೀಮಿಯರ್ ಶೋ ಟಿಕೆಟ್‌ಗಳನ್ನು ಕೊನೆಯ ಹಂತದಲ್ಲಿ ಬಿಡುಗಡೆ ಮಾಡಲಾಯಿತು. ಇದು ಅಭಿಮಾನಿಗಳಲ್ಲಿ ಗೊಂದಲ ಹಾಗೂ ಅಸಮಾಧಾನಕ್ಕೆ ಕಾರಣವಾಯಿತು.

ಆಂಧ್ರ ಪ್ರದೇಶದಲ್ಲಿ ಯಾವುದೇ ಅಡಚಣೆ ಇಲ್ಲದೆ ಪ್ರೀಮಿಯರ್ ಶೋಗಳು ನಡೆದರೆ, ತೆಲಂಗಾಣದ ಕೆಲವು ಚಿತ್ರಮಂದಿರಗಳಲ್ಲಿ, ವಿಶೇಷವಾಗಿ ಹೈದರಾಬಾದ್‌ನಲ್ಲಿ, ಶೋಗಳು ಬಹಳ ತಡವಾಗಿ ಆರಂಭವಾದವು. ಇದರಿಂದ ಅಭಿಮಾನಿಗಳ ಆಕ್ರೋಶ ಭುಗಿಲೆದ್ದು, ಕೆಲ ಚಿತ್ರಮಂದಿರಗಳಲ್ಲಿ ಗಲಾಟೆ ನಡೆಯಿತು.

ಹೈದರಾಬಾದ್‌ನ ವಿಮಲ್ ಚಿತ್ರಮಂದಿರದಲ್ಲಿ ಪ್ರಭಾಸ್ ಅಭಿಮಾನಿಗಳು ಶೋ ವಿಳಂಬದ ವಿರುದ್ಧ ತೀವ್ರವಾಗಿ ಪ್ರತಿಕ್ರಿಯಿಸಿ, ಚಿತ್ರಮಂದಿರದ ಗಾಜುಗಳನ್ನು ಒಡೆದಿದ್ದಾರೆ. ನಗರದಲ್ಲಿನ ಇನ್ನೂ ಕೆಲವು ಚಿತ್ರಮಂದಿರಗಳಲ್ಲಿಯೂ ಸಹ ಗಲಾಟೆ ನಡೆದಿದೆ. ಪರಿಸ್ಥಿತಿ ಕೈಮೀರಿದ ಹಿನ್ನೆಲೆಯಲ್ಲಿ ಪೊಲೀಸರು ಲಾಠಿಚಾರ್ಜ್ ನಡೆಸಬೇಕಾಯಿತು. ಈ ವೇಳೆ ಕೆಲ ಅಭಿಮಾನಿಗಳು ಪೊಲೀಸರಿಂದ ಲಾಠಿ ಕಿತ್ತುಕೊಂಡು ಅವರ ಮೇಲೆಯೇ ದಾಳಿ ಮಾಡಿದ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

ಇತ್ತ ‘ದಿ ರಾಜಾ ಸಾಬ್’ ಸಿನಿಮಾ ಹಾರರ್ ಕಾಮಿಡಿ ಚಿತ್ರವಾಗಿದ್ದು, ಪ್ರಭಾಸ್ ಜೊತೆಗೆ ನಿಧಿ ಅಗರ್ವಾಲ್, ರಿಧ್ಧಿ ಕುಮಾರ್, ಮಾಳವಿಕಾ ಮೋಹನನ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಬೊಮನ್ ಇರಾನಿ ಮತ್ತು ಸಂಜಯ್ ದತ್ ಸಹ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ನಿರ್ದೇಶಕ ಮಾರುತಿ ಈ ಸಿನಿಮಾಗೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಬಹಳ ವರ್ಷಗಳ ಬಳಿಕ ಪ್ರಭಾಸ್ ಹಾಸ್ಯಕ್ಕೆ ಒತ್ತು ನೀಡಿದ ಪಾತ್ರದಲ್ಲಿ ಕಾಣಿಸಿಕೊಂಡಿರುವುದು ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ.

ವೈದ್ಯೆ ಕೊಲೆ ಕೇಸ್: ಇಂದು ಕೋರ್ಟ್‌ʼಗೆ 1200 ಪುಟಗಳ ಚಾರ್ಜ್ ಶೀಟ್ ಸಲ್ಲಿಕೆ

0

ಬೆಂಗಳೂರು: ಕಳೆದ ವರ್ಷ ನಡೆದ ವೈದ್ಯ ಪತಿಯಿಂದಲೇ ಪತ್ನಿ ಕೃತಿಕಾ ರೆಡ್ಡಿ ಕೊಲೆ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಯನ್ನು ಪೂರ್ಣಗೊಳಿಸಿರುವ ಮಾರತಹಳ್ಳಿ ಪೊಲೀಸರು, ದೋಷಾರೋಪ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲು ಅಂತಿಮ ಸಿದ್ಧತೆ ನಡೆಸಿದ್ದಾರೆ.

ವೈದ್ಯೆ ಕೃತಿಕಾ ರೆಡ್ಡಿ ಪತಿ, ವೈದ್ಯ ಮಹೇಂದ್ರ ರೆಡ್ಡಿ ವಿರುದ್ಧ ಪೊಲೀಸರು ಚಾರ್ಜ್‌ಶೀಟ್ ಸಿದ್ಧಪಡಿಸಿದ್ದು, ಸುಮಾರು 1200 ಪುಟಗಳ ಬೃಹತ್ ದೋಷಾರೋಪ ಪಟ್ಟಿಯನ್ನು ಇಂದು ಎಸಿಜೆಎಂ ನ್ಯಾಯಾಲಯಕ್ಕೆ ಸಲ್ಲಿಸಲು ನಿರ್ಧರಿಸಲಾಗಿದೆ.

ಕೃತಿಕಾ ರೆಡ್ಡಿ ಕೊಲೆ ಪ್ರಕರಣದಲ್ಲಿ ತಾಂತ್ರಿಕ ಸಾಕ್ಷ್ಯಗಳು, ಎಫ್‌ಎಸ್‌ಎಲ್ ವರದಿಗಳು ಸೇರಿದಂತೆ ಒಟ್ಟು 72ಕ್ಕೂ ಹೆಚ್ಚು ಮಹತ್ವದ ಸಾಕ್ಷ್ಯಗಳನ್ನು ಪೊಲೀಸರು ಸಂಗ್ರಹಿಸಿ ಚಾರ್ಜ್‌ಶೀಟ್‌ನಲ್ಲಿ ದಾಖಲಿಸಿದ್ದಾರೆ. ಡಿಜಿಟಲ್ ಸಾಕ್ಷ್ಯಗಳು, ವೈದ್ಯಕೀಯ ದಾಖಲೆಗಳು ಹಾಗೂ ತಾಂತ್ರಿಕ ಮತ್ತು ಎಫ್‌ಎಸ್‌ಎಲ್ ವರದಿಗಳ ಆಧಾರದ ಮೇಲೆ ಮಹೇಂದ್ರ ರೆಡ್ಡಿಯನ್ನು ಆರೋಪಿಯಾಗಿ ಗುರುತಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿ ಮಹೇಂದ್ರ ರೆಡ್ಡಿ ಅನೆಸ್ತೇಷಿಯಾ ಔಷಧ ಖರೀದಿಸಿದ ವಿವರಗಳು, ಮೆಡಿಕಲ್ ಸ್ಟೋರ್‌ಗೆ ತೆರಳಿ ಮರಳಿದ ಸಿಸಿಟಿವಿ ದೃಶ್ಯಾವಳಿಗಳು ಹಾಗೂ ಯುಪಿಐ (UPI) ಮೂಲಕ ಹಣ ಪಾವತಿ ಮಾಡಿದ ದಾಖಲೆಗಳನ್ನು ತನಿಖಾಧಿಕಾರಿಗಳು ಸಂಗ್ರಹಿಸಿದ್ದಾರೆ. ಇದರೊಂದಿಗೆ, ಮಹೇಂದ್ರ ರೆಡ್ಡಿ ತನ್ನ ಸ್ನೇಹಿತೆಯೊಂದಿಗೆ ನಡೆಸಿದ್ದ ಫೋನ್ ಚಾಟಿಂಗ್ ವಿವರಗಳನ್ನು ಪೊಲೀಸರು ರಿಟ್ರೀವ್ ಮಾಡಿದ್ದು, ಅವುಗಳಲ್ಲಿ ಪ್ರಮುಖ ಎಂಟು ಸಂದೇಶಗಳಲ್ಲಿ ಕೊಲೆಯ ರಹಸ್ಯ ಅಡಗಿದ್ದುದಾಗಿ ತಿಳಿಸಿದ್ದಾರೆ.

ಕೊಲೆ ನಡೆದ ಒಂದೂವರೆ ತಿಂಗಳ ನಂತರವೂ ಸತ್ಯವನ್ನು ಮರೆಮಾಚಲಾಗದೆ, ಮಹೇಂದ್ರ ರೆಡ್ಡಿ ತನ್ನ ಸ್ನೇಹಿತೆಯೊಂದಿಗೆ ನಡೆಸಿದ ಫೋನ್ ಚಾಟಿಂಗ್‌ನಲ್ಲಿ ಕೊಲೆಯ ಕುರಿತು ಬಿಚ್ಚಿಟ್ಟಿರುವ ಅಂಶಗಳನ್ನು ಚಾರ್ಜ್‌ಶೀಟ್‌ನಲ್ಲಿ ಸೇರಿಸಲಾಗಿದೆ ಎಂದು ಮಾರತಹಳ್ಳಿ ಪೊಲೀಸರು ಮಾಹಿತಿ ನೀಡಿದ್ದಾರೆ.

SSLC ವಿದ್ಯಾರ್ಥಿಗಳೇ ಎಚ್ಚರ! ಪ್ರಶ್ನೆ ಪತ್ರಿಕೆ ಸಿಗುತ್ತೆ ಅಂತ ಯಾಮಾರಬೇಡಿ

0

ಬೆಂಗಳೂರು: ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳು ಸಮೀಪಿಸುತ್ತಿರುವ ಹಿನ್ನಲೆಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಕಿಡಗೇಡಿಗಳು ವಿದ್ಯಾರ್ಥಿಗಳ ಭವಿಷ್ಯದ ಜೊತೆ ಆಟವಾಡುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿವೆ. ಪ್ರಶ್ನೆ ಪತ್ರಿಕೆ ಲೀಕ್ ಮಾಡುತ್ತೇವೆ ಎಂದು ಹೇಳಿ ಇನ್‌ಸ್ಟಾಗ್ರಾಮ್ ಹಾಗೂ ಯೂಟ್ಯೂಬ್‌ನಲ್ಲಿ ಪೋಸ್ಟ್‌, ವೀಡಿಯೊ ಮತ್ತು ಬಯೋಗಳಲ್ಲಿ ಪ್ರಕಟಣೆ ನೀಡಿ ವಿದ್ಯಾರ್ಥಿಗಳಿಂದ ಹಣ ವಸೂಲಿ ಮಾಡಲಾಗುತ್ತಿದೆ.

ಈಗಾಗಲೇ 10ನೇ ತರಗತಿ ವಿದ್ಯಾರ್ಥಿಗಳಿಗೆ ಮೊದಲ ಹಂತದ ಪೂರ್ವಸಿದ್ಧತಾ ಪರೀಕ್ಷೆಗಳು ಆರಂಭವಾಗಿದ್ದು, ಮಾರ್ಚ್ ತಿಂಗಳಿಂದ ಮುಖ್ಯ ಪರೀಕ್ಷೆಗಳು ನಡೆಯಲಿವೆ. ಈ ಸಂದರ್ಭದಲ್ಲಿ ಕೆಲ ಕಿಡಗೇಡಿಗಳು ಎಸ್‌ಎಸ್‌ಎಲ್‌ಸಿ ಹಾಗೂ ಪೂರ್ವಭಾವಿ ಪ್ರಶ್ನೆ ಪತ್ರಿಕೆ ಲೀಕ್ ಮಾಡುತ್ತೇವೆ ಎಂಬ ಸುಳ್ಳು ಸುದ್ದಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಡುತ್ತಿದ್ದಾರೆ.

100 ರೂಪಾಯಿ ಫೋನ್‌ಪೇ ಅಥವಾ ಇತರೆ ಆನ್‌ಲೈನ್ ಪಾವತಿ ಮಾಡಿದರೆ ಪ್ರಶ್ನೆ ಪತ್ರಿಕೆ ನೀಡುವುದಾಗಿ ಹೇಳಿ ವಿದ್ಯಾರ್ಥಿಗಳನ್ನು ಮೋಸಗೊಳಿಸಲಾಗುತ್ತಿದೆ. ಈ ರೀತಿ ಹರಿದಾಡುತ್ತಿರುವ ಪ್ರಶ್ನೆ ಪತ್ರಿಕೆಗಳು ಸಂಪೂರ್ಣ ನಕಲಿಯಾಗಿದ್ದು, ವಿದ್ಯಾರ್ಥಿಗಳು ತಮ್ಮ ಅಮೂಲ್ಯ ಸಮಯದ ಜೊತೆಗೆ ಹಣವನ್ನೂ ಕಳೆದುಕೊಳ್ಳುತ್ತಿದ್ದಾರೆ. ಇದರಿಂದ ಲಕ್ಷಾಂತರ ವಿದ್ಯಾರ್ಥಿಗಳು ಆತಂಕಕ್ಕೆ ಒಳಗಾಗಿದ್ದಾರೆ.

ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ ಎಂಬ ವದಂತಿ ಕೇಳಿ ವಿದ್ಯಾರ್ಥಿಗಳು ಆತುರಪಡುವ ಅಗತ್ಯವಿಲ್ಲ ಎಂದು ಶಿಕ್ಷಣ ತಜ್ಞರು ಎಚ್ಚರಿಕೆ ನೀಡಿದ್ದಾರೆ. ಇಂತಹ ಸುಳ್ಳು ಪ್ರಚಾರಕ್ಕೆ ಬಲಿಯಾಗದೆ ಅಧಿಕೃತ ಮೂಲಗಳಿಂದ ಬಂದ ಮಾಹಿತಿಯ ಮೇಲಷ್ಟೇ ನಂಬಿಕೆ ಇಡಬೇಕು ಎಂದು ಅವರು ಸಲಹೆ ನೀಡಿದ್ದಾರೆ.

ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿರುವ ಖಾಸಗಿ ಶಿಕ್ಷಣ ಇಲಾಖೆ ಹಾಗೂ ಅಸೋಸಿಯೇಟೆಡ್ ಮ್ಯಾನೇಜ್‌ಮೆಂಟ್ ಆಫ್ ಪ್ರೈಮರಿ ಅಂಡ್ ಸೆಕೆಂಡರಿ ಸ್ಕೂಲ್ಸ್ ಇನ್ ಕರ್ನಾಟಕ ಸಂಘಟನೆಗಳು ಸಂಬಂಧಿಸಿದ ಅಧಿಕಾರಿಗಳಿಗೆ ದೂರು ಸಲ್ಲಿಸಿದ್ದು, ಕಿಡಗೇಡಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿವೆ. ವಿದ್ಯಾರ್ಥಿಗಳು ಯಾವುದೇ ಸುಳ್ಳು ಸುದ್ದಿಗೆ ಕಿವಿಗೊಡದೆ ಎಚ್ಚರಿಕೆಯಿಂದ ಇರಬೇಕು ಎಂದು ಮನವಿ ಮಾಡಲಾಗಿದೆ.

ಚಾಮರಾಜನಗರ| ಮಲೆಮಹದೇಶ್ವರಸ್ವಾಮಿ ಹುಂಡಿಯಲ್ಲಿ ₹2.48 ಕೋಟಿ ಕಾಣಿಕೆ ಸಂಗ್ರಹ!

0

ಚಾಮರಾಜನಗರ:- ಜಿಲ್ಲೆಯ ಪ್ರಸಿದ್ಧ ಯಾತ್ರಾಸ್ಥಳವಾದ ಶ್ರೀ ಮಲೆಮಹದೇಶ್ವರಸ್ವಾಮಿ ದೇವಾಲಯದ ಹುಂಡಿ ಎಣಿಕೆ ಕಾರ್ಯ ಬೆಟ್ಟದ ಬಸ್ ನಿಲ್ದಾಣದಲ್ಲಿರುವ ವಾಣಿಜ್ಯ ಸಂಕೀರ್ಣದಲ್ಲಿ ನಡೆಯಿತು.

ಸಾಲೂರು ಮಠದ ಪೀಠಾಧಿಪತಿ ಶ್ರೀ ಶಾಂತಮಲ್ಲಿಕಾರ್ಜುನಸ್ವಾಮಿಗಳ ಸಾನ್ನಿಧ್ಯದಲ್ಲಿ ಮಲೆಮಹದೇಶ್ವರಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಎ.ಇ. ರಘು ನೇತೃತ್ವ ವಹಿಸಿದ್ದರು. 29 ದಿನಗಳ ಅವಧಿಯಲ್ಲಿ ಹುಂಡಿಯಲ್ಲಿ ಸಂಗ್ರಹವಾದ ನಗದು, ನಾಣ್ಯ ಹಾಗೂ ಇ-ಹುಂಡಿಯ ಎಣಿಕೆ ನಡೆಯಿತು.

ಈ ಅವಧಿಯಲ್ಲಿ ಒಟ್ಟು ₹2.48 ಕೋಟಿ ನಗದು ಸಂಗ್ರಹವಾಗಿದ್ದು, 35 ಗ್ರಾಂ ಚಿನ್ನ, 1 ಕೆಜಿ 62 ಗ್ರಾಂ ಬೆಳ್ಳಿ ದೊರೆತಿದೆ. ಜೊತೆಗೆ 6 ವಿದೇಶಿ ನೋಟುಗಳು ಹಾಗೂ ₹2000 ಮುಖಬೆಲೆಯ 2 ನೋಟುಗಳು ಪತ್ತೆಯಾಗಿವೆ.

ಎಣಿಕೆ ಕಾರ್ಯದಲ್ಲಿ ಪ್ರಾಧಿಕಾರದ ನಾಮ ನಿರ್ದೇಶಿತ ಸದಸ್ಯರಾದ ಭಾಗ್ಯಮ್ಮ, ಕುಪ್ತಾ, ಮರಿಸ್ವಾಮಿ ಕಾಗಲವಾಡಿ, ಮಹದೇವಪ್ಪ ಕೀಳನಪುರ, ಗಂಗನ ತಿಮ್ಮಯ್ಯ ಮೆಲ್ಲಹಳ್ಳಿ, ಪ್ರಾಧಿಕಾರದ ಹಣಕಾಸು ಹಾಗೂ ಲೆಕ್ಕಪತ್ರ ಸಲಹೆಗಾರ ಮಹದೇವು, ಉಪಕಾರ್ಯದರ್ಶಿ ಚಂದ್ರಶೇಖರ ಜಿ.ಎಲ್., ಲೆಕ್ಕ ಅಧೀಕ್ಷಕ ಗುರುಮಲ್ಲಯ್ಯ, ಜಿಲ್ಲಾಡಳಿತ ಕಚೇರಿಯ ಮಹೇಶ್ ಚಂದ್ರ ಸೇರಿದಂತೆ ಬ್ಯಾಂಕ್ ಸಿಬ್ಬಂದಿ ಭಾಗವಹಿಸಿದ್ದರು.

error: Content is protected !!